Saturday, May 2, 2009

ಭಾವಾಂತರಂಗ- ೭

"ಈ ಪ್ರೀತಿ ಹೀಗೇನಾ...."

ಅಪ್ಪನಿಂದ ಬೈಸಿಕೊಂಡರೂ ಸರಿಯೇ.. ಅಮ್ಮನಿಂದ ಉಗಿಸಿಕೊಂಡರೂ ಸರಿಯೇ.. ಅಣ್ಣನಿಂದ ಹೊಡೆಸಿಕೊಂಡರೂಸರಿಯೇ.. ವರ್ಷಕ್ಕೆ ಒಂದೇ ದಿನ ಬರೋದು 'ವ್ಯಾಲೆನ್ ಟೈನ್ಸ್ ಡೇ" ನಾಳೆ ಏನಾದ್ರೂ ಆಗ್ಲಿ.. ಅವ್ಳಿಗೆ ಹೇಳೆಬಿಡ್ತೀನಿ.."ನೀನಂದ್ರೆ ನನಗಿಷ್ಟ ಅಂತ.." ಹೀಗಂತ ಅನಿಸಿದ್ದು ಒಂದು ದಿನ..ಕಾರಣ ಬೆಳಗಾದ್ರೆ ಫೆಬ್ರವರಿ 14 ನಡೆದದ್ದು ಏನು ಅಂತ ಹೇಳ್ತೀನಿ ಕೇಳಿ...

ನಾನೀಗ ಹೇಳೋಕೆ ಹೊರಟಿರೋ ಹುಡುಗಿ.. ನೋಡೋಕೆ ತೆಳ್ಳಗೆ, ಸುಂದರ ಮುಖ, ಸೌಮ್ಯ ಸ್ವಭಾವ..ನಕ್ಕರೆಗುಳಿಬಿದ್ದ ಕೆನ್ನೆ, ಉದ್ದವಾದ ಜಡೆ, ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುವ ಮುಗ್ಧ ಮನಸ್ಸು ಅವಳ ಕಣ್ಣಂತೂ..ಆಹಾ! ಅವಳ ಕಣ್ ಗಳನ್ನ ನೋಡ್ತಿದ್ರೆ ಯಾವುದೋ ಒಂದು ಮಧುರವಾದ ಭಾವನೆ ಓಡಿಬಂದು ಹೃದಯಾನತಬ್ಬಿಕೊಂಡ ಹಾಗೆ ಅನುಭವ ಆಗ್ತಿತ್ತು..ಒಟ್ಟಾರೆಯಾಗಿ ಹುಡುಗಿ ಪಕ್ಕಾ ಸತ್ಯನಾರಾಯಣ ಪೂಜೆಯ ಪ್ರಸಾದ... ಅವಳ ಹೆಸರು "ಅರ್ಚನಾ" ಅಂತ....

ಅರ್ಚನಾ ಬಗ್ಗೆ ಮೊದಲು ನನಗಿದ್ದದ್ದು ಅಯ್ಯೋ ಪಾಪ ಮುಗ್ಧೆ ಎನ್ನುವ ಕನಿಕರ ಮಾತ್ರ...! ನಾನು ಕಾಲೇಜಿನಲ್ಲಿ ಎಲ್ಲಾ ಹುಡುಗರಿಗೂ..ಗೆಳಯರಿಗೂ ಲವ್ ಲೆಟರ್ ಬರೆದುಕೊಡುತ್ತಿದ್ದೆ. ಎಲ್ಲಾ ಹುಡುಗರೂ ನನ್ನ ಕಾಡಿಸಿ-ಪೀಡಿಸಿ ಲವ್ ಲೆಟರ್ ಬರೆಸಿಕೊಳ್ಳುತ್ತಿದ್ದರು. ನಾನು ಹುಡುಗರ ಹೆಸರಿನಲ್ಲಿ ಬರೆದ ಲೆಟರನ್ನು ಓದಿದ ಹುಡುಗಿಯರು.. ಲೆಟರ್ ಕೊಟ್ಟ ಹುಡುಗಿಗೆ 100% ಮನಸೋತು ಅಲ್ಲೇ 'ಹೃದಯ ಸಂಗಮ' ಆಗುವಂತೆ ಮಾಡುತ್ತಿದ್ದೆ. ನಮ್ಮಕಾಲೇಜಿನಲ್ಲಿ ಎಲ್ಲಾ ಹುಡುಗರು ನನ್ ಹತ್ರ ಬರೆದು ಕೊಡು ಗುರೂ... ಅಂತ ನನ್ನ ಮನೆವರೆಗೂ ಅದೆಷ್ಟು ಸಾರಿ ನನ್ನಹಿಂದೆ ದುಂಬಾಲು ಬಿದ್ದು ಬಂದಿದ್ದರು. ಅವರಿಗೆಲ್ಲಾ ನಾನು ನಿದಿರೆಗೆಟ್ಟು ಲವ್ ಲೆಟರ್ ಬರೆದುಕೊಡುತ್ತಿದ್ದೆ. ಅದುಸಕ್ಸಸ್ಸೂ ಆಗುತ್ತಿತ್ತು. ಪಾಪಿ ನನ್ಮಕ್ಳು.. ನನ್ನ ಮುದ್ದಾದ ಬರವಣಿಗೆಯನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಅದೆಷ್ಟೋ ಮನಸ್ಸುಗಳ ಮೈನಕ್ಕೆ ಮುನ್ನುಡಿ ಬರೆದಿರೋ ಏಕೈಕ ವ್ಯಕ್ತಿ ನಾನು.

ಒಂದು ದಿನ ನವೀನ ನನ್ನ ಹತ್ರ ಬಂದ..ಕವೀ..ಕವೀ.. ಎಂದು ನನ್ನಿಂದೆ ಸುತ್ತುತ್ತಿದ್ದ ...ನಾನು ನನ್ನ ಕಾಲೇಜ್ದಿನಗಳಲ್ಲಿ ದೂರದರ್ಶನಕ್ಕೆ ಎಂದು ಧಾರವಾಹಿಯಲ್ಲಿ ಸಂಭಾಷಣೆಕಾರನಾಗಿ.. ಮತ್ತು ಸಹ ನಿರ್ದೇಶಕನಾಗಿ ಕೆಲಸಮಾಡುತ್ತಿದ್ದೆ. ಇಂಥ ನನ್ನ ಕಾರ್ಯೋತ್ತಡ ಇದ್ದರೂ ನವೀನನ ತಳಮಳ ನನದೂ ಅರ್ಥವಾಗುತ್ತಿತ್ತು. ಒಟ್ಟಾರೆಯಾಗಿ ಅವನ ಬೆಂಬಿಡದ ಕಾಟ ತಾಳಲಾರದೆ..ಅವನಿಗೆ ಲವ್ ಲೆಟರ್ ಬರೆದು ಕೊಡುವ ಮನಸ್ಸುಮಾಡಿದೆ. "ಹುಡುಗಿ ಯಾರೂ ಗುರೂ ಎಂದೆ. ಅವನು 'ಅರ್ಚನಾ ಅಂದ. ಆಗ ನನ್ನ ಮನಸ್ಸು ಹಿಂಜರಿಯಿತು. ಕಾರಣ, ಪಾಪ ಮುಗ್ಡ ಹುಡುಗಿನಾ ...ಇವನೇನಾದ್ರೂ ಹಾಳುಮಾಡಿದ್ರೆ? ಅವಳೂ ಮುಗ್ಢ ಹುಡುಗಿ..ಅವಳ ಬಗ್ಗೆ ನಿನಗೆಕನಿಕರ ಇದೆ. ಹುತ್ತಕ್ಕೆ ಕೈ ಹಾಕಿದ್ದಾನಲ್ಲಾ.. ಎಂದು ಕೊಂಡೆ. ನಂತರ ನನ್ನ ಮನಸ್ಸು ಅಂಥಹಾ ಮುಗ್ಧ ಹುಡುಗಿಗೆನವೀನನ ಹೆಸರಲ್ಲಿ ನಾನು ಲೆಟರ್ ಬರೆದುಕೊಡಲು ಹಿಂಜರಿದೆ. ಆದರೆ, ಅಂದು ಅವನ ಒತ್ತಡಕ್ಕೆ ಲವ್ ಲೆಟರ್ಬರೆದುಕೊಟ್ಟೆ.

...ಪ್ರಿಯ ಹೃದಯ..ಓಂ..ನಮ.. .. ಪ್ರೇಮ.. ಒಂದಾಗಿಸೇ....ಪ್ರೇಮಾ...
ಹಾಯ್ ಹಾಯ್ ಮೈ ಸ್ವೀಟ್ ಹಾರ್ಟ್..ಯುವರ್ ಹಾರ್ಟ್ ಇಸ್ ವೇರಿ ಡಿಯರ್ ಅಂಡ್ ನಿಯರ್ ಟು ಮೈಹಾರ್ಟ್..ಹೀಗೆ ಮುಂದುವರೆಸಿದೆ.

ನನ್ನ ಬರವಣಿಗೆಯಲ್ಲಿದ್ದ ದಮ್ಮು.. ಮುಗ್ಧ ಹುಡುಗಿ ಹಾರ್ಟ್ ಆವರಿಸಿದ್ದು ನಿಜ. ಲೆಟರ್ ನಿಂದ ಅರ್ಚನಾ..! ಲೆಟರ್ ನಿಂದ ಅರ್ಚನಾ ಚೇತರಿಸಿಕೊಳ್ಳಲು ಬಹಳ ಕಷ್ಟ ಆಯ್ತು ಅನಿಸುತ್ತೆ. ಕಾರಣ ಆಗ ತಾನೆ 16 ಹರೆಯಕ್ಕೆಕಾಲಿಟ್ಟಿದ್ದಳು ಅರ್ಚನಾ..! ಇಡೀ ಕಾಲೇಜಿನಲ್ಲಿ ಅವಳೇ ಸುಂದರ ಹುಡುಗಿ ಜೊತೆಗೆ ಅವಳು ತುಂಬಾ ಸೌಮ್ಯಸ್ವಭಾವದ ಸೂಕ್ಷ್ಮ ಮನಸ್ಸಿನ ಹುಡುಗಿ..ಅರ್ಚನಾ ಅಂದ್ರೆ ಎಲ್ಲರಿಗೂ ಇಷ್ಟಾನೆ.. ನನಗೂ ಇಷ್ಟ..ಇಷ್ಟ.. ಅಷ್ಟೇ..!

ಅರ್ಚನಾಗೆ ಒಬ್ಬಳು ಗೆಳತಿ ಇದ್ದಳು. ಅವಳ ಹೆಸರು ಬಿಂದು. ಸದಾ ಅರ್ಚನಾಳ ಜೊತೆಯಲ್ಲೇ ಇರುತ್ತಿದ್ದ ಬಿಂದುಅರ್ಚನಾಳ ಊರಿನವಳೇ. ಹಾಗೆಯೇ ಇವರಿಬ್ಬರೂ ತುಂಬಾ ಆತ್ಮೀಯರು. ಬಿಂದುವಿಗೆ ನನ್ನ ಬಗ್ಗೆ ಸಂಪೂರ್ಣಗೊತ್ತಿತ್ತು. ನಾನು ಕುಡಿಯೋದರಿಂದ ಹಿಡಿದು ಭಾವನೆಗಳಿಗೆ ಬಣ್ಣ ಹಚ್ಚುವ ಹಾಗೆ ಬರೆಯುವ ತನಕನೂ 'ಬಿಂದು' ಗೆನನ್ ಬಗ್ಗೆ ಗೊತ್ತು. ಬಹುಶಃ ಕಥೆಯ ಕ್ಲೈಮಾಕ್ಸ್ ಗೆ ಇದೇ ಕಾರಣವಾಯ್ತೋ ಏನೋ ಗೊತ್ತಿಲ್ಲ.. ಆದರೆ ಅದೆಲ್ಲವೂಅನುಪಮ'.

ಒಂದು ದಿನ ನಾನು ದೂರದರ್ಶನಕ್ಕೆ ಒಂದು ಕಿರುಚಿತ್ರ ಚಿತ್ರೀಕರಣಕ್ಕೆ ಶೃಂಗೇರಿ ಸಮೀಪ ಒಂದು ಬ್ರಾಹ್ಮಣರಮನೆಗೆ ಹೋಗಿದ್ದೆ( ಸಹ ನಿರ್ದೇಶಕನಾಗಿ) ಕಿರುಚಿತ್ರದ ಚಿತ್ರೀಕರನವೂ ಮರುದಿನವೂ ಇದ್ದ ಕಾರಣ ನಾವೆಲ್ಲಅಲಿಯೇ ಉಳಿದಿದ್ದೆವು. ಬ್ರಾಹ್ಮಣರ ಮನೆಯಲ್ಲಿ ಅಂದು 'ತುಳಸೀದೀಪ' ಅದು ಚಳಿಗಾಲ ಬೇರೆ...ಅಲ್ಲಿಗೆ ಅರ್ಚನಾಬಂದಿದ್ದಳು ಕಾರಣ ಅದು ಅರ್ಚನಾಳ ಗೆಲತಿಯ ಮನೆ . ಅರ್ಚನಾ ಬರುವ ವಿಷಯ ನನಗೂ ತಿಳಿದಿರಲಿಲ್ಲ. ಆಗಸಮಯ ಸುಮಾರು 8 ಗಂಟೆ ರಾತ್ರಿ. ತುಳಸಿದೀಪದ ಪೂಜೆಯ ಸಮಯದಲ್ಲಿ ಅಲ್ಲಿದ್ದ ಹುಡುಗರು ಒಂದು ಪಟಾಕಿಯಸರವನ್ನು ಹಚ್ಚಿ ನಾನು ಮತ್ತು ಅರ್ಚನಾ ನಿಂತಿದ್ದ ಸ್ಥಳದಲ್ಲಿ ಹಾಕಿದರು. ಪಟಾಕಿ ಸಿಡಿಯಲು ಪ್ರಾರಂಭಿಸಿತು. ಅದೂ ಅರ್ಚನಾಳ ಕಾಲ ಕೆಳಗೆ...! ಅರ್ಚನಾ ನನ್ನ ಮುಂದೆಯೇ ನಿಂತಿದ್ದಳು..ಆಗ! ಪಟಾಕಿಯ ಸದ್ದಿಗೆ ಹೆದರಿದಅರ್ಚನಾ ಕಣ್ಮುಚ್ಚಿ 'ಅಮ್ಮಾ' ಎಂದು ಹಿಂತಿರುಗಿ ಗಟ್ಟೊಯಾಗಿ ತಬಿಕೊಂಡದ್ದು ನನ್ನನ್ನೇ...!

ಅಲ್ಲಿ ಸಮಯದಲ್ಲಿ ಸುಮಾರು 25 ಜನ ಇದ್ದರು. ಸುಮಾರು ಒಂದು ನಿಮಿಷಗಳ ಕಾಲ ಪಟಾಕಿಯ ಸಿಡಿತಡಬ್-ಡಬ್' ಎನ್ನುವ ಸದ್ದಾದರೆ, ಕವಿಯ ಹೃದಯದಲ್ಲಿ 'ಲಬ್-ಡಬ್'. ಕಾರಣ 25 ಜನರ ಮುಂದೆ ಇಂತಹದೃಶ್ಯ..! ಒಂದು ರೀತಿ ಸಿನಿಮಾ ಕಥೆ ಇದ್ದ ಹಾಗೆ...!

ಕ್ಷಣದಲ್ಲಿ ನನಗೆ ನಾಳೆ ಮಾಡಬೇಕಾದ ಚಿತ್ರೀಕರಣದ ಯೋಜನೆಗಳೆಲ್ಲಾ.. ಎಲ್ಲಿ ಮಾಯವಾಗಿದ್ದವೋ ಗೊತ್ತಿಲ್ಲ..!

'ಮನಸ್ಸು ಮೃದುವಾಗಿತ್ತು ನಾಚಿ ನೀರಾಗಿತ್ತು.. ಅನುಭವ ಹೇಗಿತ್ತು ಅಂದರೆ ಅಬ್ಬಾ.. ಅನುಪಮ..! ಪಟಾಕಿಸಿಡಿಯುವುದು ನಿಲ್ಲುವವರೆಗೆ..ಅರ್ಚನಾ ನನ್ನ ತಬ್ಬಿಕೊಂಡಿದ್ದಳು.. ಅವಳ ಮುಗ್ಧ ಮುಖ ನನ್ನ ಎದೆಯ ಗೂಡಲ್ಲಿರೆಪ್ಪೆಯೊಳಗಿನ ಕಣ್ಣಂತೆ ಭದ್ರವಾಗಿತ್ತು..! ನಂತರ ಮನೆಯಲ್ಲಿ ಊಟದ ಸಮಯ. ಆಗ ಸುಮಾರು 9.30 ಇರಬಹುದು. ನಾನು ನಾಳಿನ ಚಿತ್ರೀಕರಣದ ಬಗ್ಗೆ ಏನನ್ನೋ ಬರೆಯುತ್ತಾ ಕುಳಿತಿದ್ದೆ.. ಆಗ ಒಂದು ಧ್ವನಿ ನನ್ನರೀ..ಊಟಕೆ..ಕರೀತಿದ್ದಾರೆ..."ಎಂದು ಕರೆದರು... ತಲೆ ಎತ್ತಿ ನೋಡಿದರೆ ಅರ್ಚನಾ...ನನಗೂ ಘಟನೆಯಿಂದನಾಚಿಕೆ..! ಅರ್ಚನಾಗೂ..ನಾಚಿಕೆ..!

ಊಟವೆಲ್ಲ್ಲಾ ಮುಗಿದ ಮೇಲೆ ಅರ್ಚನಾ ಮತ್ತು ಅವಳ ಗೆಳತಿಯರು ಎಲ್ಲರೂ ಸೇರಿ 'ಅಂತ್ಯಾಕ್ಷರಿ' ಸ್ಪರ್ಧೆಶುರುಮಾಡಿದರು. ನನ್ನನ್ನೂ ಬಲವಂತವಾಗಿ ಅವರೆಲ್ಲಾ ಸ್ಪರ್ಧೆಗೆ ಸೇರಿಸಿಕೊಂಡರು. ಅರ್ಚನಾ..ನನ್ನ 'ಎದುರುಪಾರ್ಟಿ' ಅವಳು ಅಂದು ಹಾಡಿದ ಹಾಡಿಗೆ ನನ್ನ ಪ್ರತಿ ಹಾಡು.."ಏಕೆ.. ಹೀಗಾಯ್ತು ನಾನು ಕಾಣೆನೂ.. ಪ್ರೀತಿಮನದಲ್ಲಿ ಹೇಗೆ ಮೂಡಿತೋ.. ನೋಟದಲಿ..ಅದು ಏನಿದಿಯೋ.. ತುಟಿ ಅಂಚಿನಲಿ..ಸವಿ ಜೇನಿದೆಯೋ..ನೀಲಿಬಾನಲಿ ತೇಲಿ ಹೋದೆನು ನನು ದಿನ.. "ಎಂದು ಅಂದು ಹಾಡಿದ್ದೆ. ಸೊಗಸಾದ ರಾತ್ರಿಯ ಅಂತ್ಯಾಕ್ಷರಿ ಸ್ಪರ್ಧೆಇಂದಿಗೂ ನೆನಪಿದೆ...!ಇಷ್ಟೆಲ್ಲಾ ಆದ ಎರಡು ದಿನದ ನಂತರ ನಾನು ಕಾಲೇಜಿಗೆ ಹೋದಾಗ ಅರ್ಚನಾ ಮತ್ತು ಅವಳಗೆಳತಿ ಬಿಂದು ಇಬ್ಬರೇ ಏನೋ ನನ್ನನ್ನು ನೋಡಿ ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು. ನನ್ನ ಪಾಡಿಗೆ ನಾನುಸುಮ್ಮನಿದ್ದೆ. ಮಧ್ಯಾಹ್ನ ಕ್ಲಾಸ್ ಬಿಟ್ಟಾಗ ನಾನು ಹೊರಗಡೆ ಬರುತ್ತಿದ್ದೆ. ಆಗ ಒಂದು ದನಿ ನನಗೆ 'ಎಕ್ಸ್ ಕ್ಯೂಸ್ ಮೀ..' ಎಂದಿತು. ನಾನು ತಿರುಗಿ ನೋಡಿದರೆ ಅರ್ಚನಾ. ಅವಳ ಕೈಯಲ್ಲೊಂದು ಪತ್ರ..! ಪತ್ರ ನಾನೇ ನವೀನನಹೆಸರಿನಲ್ಲಿ ಅರ್ಚನಾಳಿಗೆ ಬರೆದ ಪತ್ರ..!

ನಾನು "ಏನಿದು..!?" ಎಂದೆ.
ನನ್ನ ಪ್ರಶ್ನೆಗೆ ಅರ್ಚನಾ " ಪ್ರಶ್ನೇನಾ ನಾನ್ ನಿಮ್ಗೆ ಕೇಳಬೇಕು" ಎಂದಳು.
ನಾನು 'ಅರ್ಥ ಆಗಲಿಲ್ಲ ಎಂದೆ.

ಆಗ ಶುರುವಾಯ್ತು ನೋಡಿ..ಅರ್ಚನಾ ಒಂದೇ ಉಸಿರಿನ ಮಾತು.. "ರೀ ಇಂಥಾ ಪಾಪದ ಕೆಲ್ಸನಾ ಯಾವತ್ತುಮಾಡಬೇಡಿ ಕವಿ.. ನನಗೆ ಹಾಗೂ ಇಡೀ ಕಾಲೇಜಿಗೆ ನಿಮ್ ಬಗ್ಗೆ ಒಂದು ಗೌರವವಿದೆ. ಯಾರೋ ವ್ಯಕ್ತಿಗಳ ಸಹವಾಸಮಾಡಿ ಇಂಥಾ ಕೆಲ್ಸ ಮಾಡಬೇಡಿ. ನಾನು ಲೆಟರ್ ಓದಿದಾಗ್ಲೆ ಅಂದ್ಕೊಂಡೆ ಲೆಟರ್ 'ನವೀನ' ಬರೆಯೋಕೆಸಾಧ್ಯಾನೇ ಇಲ್ಲ.. ಆವಾಗ 'ಬಿಂದು' ನೆ ಹೇಳಿದ್ದು.. ಆಗ್ಲೆ ಗೊತ್ತಾಗಿದ್ದು ಪ್ರೀತಿಯ ಪತ್ರದ ಮುದ್ದಾದ ಅಕ್ಷರ ಮಧುರಭಾವನೆ ಎಲ್ಲಾ ನೀನೆ ಅಂತ ..ಹ್ಞೂ ..ನಾನ್ ಇಷ್ಟ ಪಟ್ಟಿರೋದು.. ಮುದ್ದಿಸೊ ಮುದ್ದಾದ ಅಕ್ಷರಗಳನ್ನು, ಮಧುರವಾದ ಭಾವನೆಯನ್ನ ಅಷ್ಟೇ, ನಿಮ್ಮ ಬರಹ ಹಾಗಿದೆ. " ಎದೆನಾ ಸೀಳಿ..ನನ್ ಹೃದಯಕ್ಕೊಂದು ಪಪ್ಪಿಕೊಟ್ಟ ಹಾಗಿತ್ತು. ಅಂದ್ರೆ ಎದೇನಾ ಸೀಳಿದ ನೋವು..ಜೊತೆಗೆ ಹೃದಯಕ್ಕೆ ಕಿಸ್ ಕೊಟ್ಟ ಹಿತ ಇವೆರಡೂ ಸೇರಿ ನನ್ಹೃದಯದ ಊರಲ್ಲಿ ಮನಸಿನ ತೇರಲ್ಲಿ ಅದೇನೋ ಕೋಲಾಹಲ. ಇವತ್ತೆ ..ಈಗ್ಲೇ ಹೇಳ್ತೀನಿ.." ಲವ್ ಯು" ಅಂತಾಎಂದಳು ಅರ್ಚನಾ...

ಲೈಫ್ ನಲ್ಲಿ ಫಸ್ಟ್ ಟೈಮ್ ಒಂದು ಹುಡುಗಿಯಿಂದ ಇಂಥಾ ಮಾತನ್ನು ಕೇಳಿದ್ದೇ. ಅವಳು ಹೇಳಿದ ಮಾತುಸರಿಯಾಗಿತ್ತು. ನಾನೇ ಮಾಡಿದ್ದು ತಪ್ಪು ಅನ್ನಿಸಿತ್ತು. ಕ್ಷಣ ಅರ್ಚನಾಳ ಮುದ್ದು ಜೀವದ ಪ್ರೀತಿಗೆ ನಾನು ಎಲ್ಲೋಒಂದು ಕಡೆ ಮಾರುಹೋಗಿದ್ದೆ. ಆದರೆ ಮುಗ್ಢ ಹುಡುಗಿಗೆ ನಾನು ಎಂದಿಗೂ ದ್ರೋಹ ಮಾಡಬಾರದೆಂಬ ಮಾನವೀಯತೆ ನನ್ನೊಂದಿಗಿತ್ತು. ನಂತರ ಮುಂದೇನಾಯ್ತು ಅಂತ ಕುತೂಹಲವೇ..? ಹಾಗಾದರೆ ನೀವು ಫೋನ್ಮಾಡಿ ಎಸ್ ಎಂಎಸ್ ಮಾಡಿ ಕೇಳಬಹುದು.

ಕವೀಶ್ ಶೃಂಗೇರಿ. ಫೋನ್: 9945342433,

ಭಾವಾಂತರಂಗ-೬

"ತುಂತುರು ಸೋನೆಯಲ್ಲೊಂದು ಪ್ರೇಮಕಥೆ.."

ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂದು..ಭೂಮಿನಾ ನೋಡುತ್ತಾ.. ನಿಂತಿದ್ದಾನೆ!ಮೊಗ್ಗು ಹೂವಾಗಿ ತನ್ನ ಕಂಪನ್ನು ಸೂಸುತ್ತಿದೆ...! ಇಬ್ಬನಿಯು ಆ ಹೂವ ಎದೆಯನ್ನು ಚುಂಬಿಸಿ ತೃಪ್ತಿಯಾಗಿದೆ. ದುಂಬಿಗಳು ಹೂವ ಮಧುವನ್ನು ಹೀರಲು ನಾ.. ಮುಂದು ತಾ..ಮುಂದು ಎಂದು ಹಂಬಲಿಸುತ್ತಿವೆ. ಈ ಸಮಯದಲ್ಲಿ ಹೊಸದಿನಕ್ಕೆ ಸ್ವಾಗತ ಕೋರಲು, "ಶಾಂತಿ" ಮನೆಯ ಶ್ರೀ ತುಳಸಿಯ ಮುಂದೆ ಗುಡಿಸಿ, ಸಗಣಿಯಿಂದ ಸಾರಿಸಿ...ರಂಗವಲ್ಲಿ ಇಡುತ್ತಿದ್ದಾಳೆ..! ಒಂದು ಸಂಸ್ಕೃತಿ...ಸಂಸ್ಕಾರ ಇರುವ ಮನೆತನ ಶಾಂತಿಯ ಕುಟುಂಬ. ಹೌದು ಇದು ಪಕ್ಕಾ ಮಲೆನಾಡಿನ ಅಂದರೆ ತೀರ್ಥಹಳ್ಳಿ ಅಂತ..ಕೂಗಿ ಹೇಳಲೇಬೇಕಾಗಿಲ್ಲ...!

ಶಾಂತಿ ಪ್ರತಿದಿನ ಬೆಳಗಾದ್ರೆ ಆಕೆಯ ದಿನ ಆರಂಭವಾಗುವುದೇ ಇಲ್ಲಿಂದ..!ಮನೆಮುಂದೆ ಗುಡಿಸಿ-ಸಾರಿಸಿ-ರಂಗವಲ್ಲಿ ಇಡೋದೆಂದ್ರೆ ಶಾಂತಿಗೆ ಎಲ್ಲಿಲ್ಲದ ಸಂಭ್ರಮ. ಈ ಸಂಭ್ರಮಕ್ಕೆ ಕಾರಣ ಏನು ಗೊತ್ತಾ? ಇನ್ನೂ 16-17 ರ ಹರೆಯದ ಶಾಂತಿ ಮನೆಮುಂದೆ ರಂಗವಲ್ಲಿ ಇಡುವ ಸಮಯದಲ್ಲಿ ಪ್ರತಿ ದಿನವೂ ಹಾಲು ಮಾರುವ ಹುಡುಗ 'ರಾಜೇಶ್' ಶಾಂತಿಯ ಮನೆ ಮುಂದೆ ಹಾದು ಹೋಗುವಾಗ ತನ್ನ ಸೈಕಲ್ ನ ಬೆಲ್ ಅನ್ನು 'ಟ್ರಿಣ್' ಅನ್ನಿಸಿ ಇತ್ತ ಒಂದು ನಗೆ ಬೀರಿ, ಶಾಂತಿಯ ಉದ್ದನೆಯ ಜಡೆಯನ್ನು ನೋಡಿ ಅವಳ ಮಂದಹಾಸ ನಗೆಯನ್ನು ನಿರೀಕ್ಷಿಸಿ ನಂತರ ಆ ನಗೆಯ ದರುಶನ ಸಿಕ್ಕ ನಂತರವೇ ಅವನ ಹಾಲಿನ ಸೈಕಲ್ ಮುಂದೆ ಹೋಗುತ್ತಿತ್ತು. ಅವನು ನಿರೀಕ್ಷಿಸಿದ ಆ ಮಂದಹಾಸ ನಗೆ ನಿರೀಕ್ಷಿಸಿದಂತೆಯೇ ಅವನಿಗೆ ದೊರೆಯುತ್ತಿತ್ತು ಆಹಾ! ಅದೃಷ್ಟ ಅಂದ್ರೆ ಇದೇ ರೀ...!

ರಾಜೇಶ್ ಹಾಲು ಮಾರಿ ಮತ್ತೆ ವಾಪಾಸ್ ಅವನ ಮನೆಗೆ ಹಿಂತಿರುಗುತ್ತಿರುವಾಗ ಶಾಂತಿ ಮನೆ ಮುಂದೆಯೇ ಹೋಗಬೇಕಾಗಿತ್ತು. ಇದು ಅನಿವರ್ಯವಾದರೂ ಒಂಥರಾ ಅದೃಷ್ಟ ಇರಲಿ..ಅದರ ಬಗ್ಗೆ ನಮಗೇಕೆ ಹೊಟ್ಟೆ ಕಿಚ್ಚು...! ಹೀಗೆ ರಾಜೇಶ್ ಶಾಂತಿ ಮನೆಮುಂದೆ ವಾಪಾಸ್ ಹೋಗುವಾಗಲೆಲ್ಲ ಅವನ ಹಾಲಿನ ಸೈಕಲ್ ಬೆಲ್ 'ಟ್ರಿಣ್' ಅಂತ ತಪ್ಪದೇ ಹೊಡೆಯುತ್ತಿದ್ದ... ಅದೇ ಸಮಯದಲ್ಲಿ ಶಾಂತಿ ಮನೆಮುಂದೆ ಹೂವಿನ ಗಿಡದಿಂದ ಹೂವನ್ನು ಕೊಯುತ್ತಾ ನಿಂತಿರುತ್ತಿದ್ದಳು. ಇಬ್ಬರ ಮುಖದಲ್ಲೂ ಮಂದಹಾಸ..ಒಂಥರಾ ಖುಷಿ...ಎಲ್ಲಿ ಯಾರಾದ್ರೂ ನೋಡುತ್ತಾರೋ ಎಂಬ ಭಯ ಬೇರೆ...! ಆಗ ಶಾಂತಿ ಮನಸಲ್ಲಿ ಅನಿಸಿದ್ದು ಹೀಗೆ...!
ಸುಮ್ಮನೆ ..ಸುಮ್ಮನೆ ..ಎದೆಯ ಒಳಗೇನೋ ಕಚಗುಳಿ..ಮೆಲ್ಲನೆ ಹಾಗೇನೆ..ಹೃದಯದೊಳಗೇನೋ ಚಿಲಿಪಿಲಿ..

ಮನಸು ಬಯಸಿದೆ ಹೊಂಗನಸು...
ಹೊಂಗನಸು ಬಯಸಿದೆ ಪಿಸುಮಾತು..
ಈ ವಯಸ್ಸೇ ..ಹೀಗೇನಾ...!
ಆ ರವಿಮಾಮ ದಿನವೂ ಭೂಮಿಯ ನೋಡಲು ಬಂದೇ ಬರುತ್ತಾನೆ...
ಈ ನನ್ನ ಮಾಮ ದಿನ ಬೆಳಗಾಗೋದನ್ನೇ ಕಾಯ್ತಾ ಇರುತಾನೆ...

ನನ್ನ ನೋಡಲು ಅವನಿಗೆ ಆತುರ....!
ಜೊತೆ ಮಾತಾಡಲು ಅವನಿಗೆ ಕಾತುರ....!
ಅನುರಾಗದ ಕಚಗುಳಿಯು ಹೀಗೇನಾ...!

ಪಾಪ ಆಗತಾನೆ ಒಂದು ಸುಂದರ ಪ್ರಪಂಚವನ್ನು ಹಂಬಲಿಸುತ್ತಾ ಆ ಹಾಡನ್ನು ಗುನುಗುವ ಆ ಶಾಂತಿಯ ಹೃದಯದಲ್ಲಿ 'ಲಬ್-ಡಬ್' ಸದ್ದಿನ ಜೊತೆಗೆ 'ಅನುರಾಗದ ಆಲಾಪನೆಯೂ' ಕೇಳಿ ಬರುತ್ತಿತ್ತು...

ಮರುದಿನ ಪಕಕ್ದ ಊರಿನ ಚಂದ್ರಣ್ಣ ಇವರ ಮನೆಯಲ್ಲಿ "ಸತ್ಯನಾರಾಯಣ ಪೂಜೆ" ಇತ್ತು. ಶಾಂತಿ ಅಲ್ಲಿಗೆ ಹೋಗಿದ್ದಳು...ರಾಜೇಶನು ಅಲ್ಲಿಗೆ ಬಂದಿದ್ದ..ಇವರಿಬ್ಬರೂ ಅಲ್ಲಿಗೆ ಬರುವ ವಿಷಯ ಇವರಿಬ್ಬರಿಗೂ ತಿಳಿದಿರಲಿಲ್ಲ. ಇಷ್ಟಕ್ಕೂ ಇವರಿಬ್ಬರೂ ಇದುವರೆಗೂ ಒಂದು ಮಾತನ್ನು ಆಡಿಲ್ಲ.. O my God..!

ಇಲ್ಲಿ ಸತ್ಯನಾರಾಯಣ ಪೂಜೆನೂ ಆಯ್ತು ನಂತರ ಊಟದ ಸಮಯದಲ್ಲಿ ರಾಜೇಶ್ ಊಟವನ್ನು ಬಡಿಸಲು ತನ್ನ ಗೆಳೆಯರೊಂದಿಗೆ ಮುಂದಾದ. ಅವನಿಗೆ ಎಲ್ಲಿಲ್ಲದ ಖುಷಿ. ಶಾಂತಿಯು ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾಳೆ.. ಅವಳ ಜೊತೆಯಲ್ಲಿ ಅವಳ ಗೆಳತಿಯರೂ ಇದ್ದಾರೆ.. ರಾಜೇಶ್ ಊಟ ಬಡಿಸುತ್ತಿದ್ದಾನೆ. ಅಲ್ಲಿ ನೆರೆದವರೆಲ್ಲರ ಕಣ್ಣು ಶಾಂತಿಯ ಮೇಲೆಯೇ. ಕಾರಣ ಶಾಂತಿ ನಕ್ಕರೆ ಅವಳ ಮುಖದಲ್ಲಿ ಎಡಗಡೆ 'ಗುಳಿಬೀಳುತ್ತಿತ್ತು.' 'ಗುಳಿಬಿದ್ದ' ಕೆನ್ನೆಯ ಹುಡುಗಿ ಶಾಂತಿಯ ನಗುವಿಗಾಗಿ ಹಂಬಲಿಸುತ್ತಿದ್ದವರು ಅದೆಷ್ಟೋ ಜನ...

ಇದೇ ಸಮಯದಲ್ಲಿ ಸಣ್ಣಗೆ ತುಂತುರು ಮಳೆ ಶುರುವಾಯಿತು...ಮಲೆನಾಡಿನ ಆ ಮಣ್ನ ಕಂಪು...ತಂಗಾಳಿ...ಎಲ್ಲವೂ ಮತ್ತಷ್ಟು ಮೆರಗು ತಂದಂತ್ತಿತ್ತು..!ಶಾಂತಿಗೆ ಮಳೆಯಲ್ಲಿ ನೆನೆಯುವ ಆಸೆ..ಆ ಮಳೆ ನೀರಿನೊಂದಿಗೆ ಆಟವಾಡುವ ಹಂಬಲ. ರಾಜೇಶ್ ಗೂ ಆ ತುಂತುರು ಸೋನೆಯ ಮಳೆಯಲ್ಲಿ ನೆನೆಯಬೇಕೆಂಬ ಆಸೆ...ಜೊತೆಗೆ ಕ್ಷಣ ಕ್ಷಣಕ್ಕೂ ಶಾಂತೀನಾ ನೋಡುತ್ತಾ ತನ್ನ ಕೈಯಲ್ಲಿ ತಲೆ ಬಾಚಿಕೊಳ್ಲುತ್ತಿದ್ದ. ಅವನಿಗೆ ಆ ಕ್ಷಣದಲ್ಲಿ ಅವನ ಕಾಲುಗಳು ಭೂಮಿ ಮೇಲೆ ನಿಲ್ಲಲಾರದ ಸ್ಥಿತಿಯಲ್ಲಿ ಇದ್ದವು.... ಅಂದರೆ... ಅವನ ಮನಸಿನ ಭಾವನೆಗೆ ಅವನ ದೇಹವು ತಕಧಿಮಿ ಅನ್ನುತ್ತಿತ್ತು.. ಅದೇ ಅಲ್ವಾ.. ಪ್ರೇಮ ನಿವೇದನೆ...!

ಆ ಮಳೆಯಲ್ಲೆ ರಾಜೇಶ್ ಶಾಂತಿಯ ನೋಡಲೆಂದೇ ಕೆಲವು ಕೆಲಸಗಳನ್ನು ನೆನೆಯುತ್ತಲೇ ಮಾಡುತ್ತಿದ್ದ. ಶಾಂತಿಗೂ ಅವನ ತಳಮಳ ಅರ್ಥವಾಗುತ್ತಿತ್ತು. ಒಮ್ಮೊಮ್ಮೆ ಮುಗುಳ್ ನಗುತ್ತಿದ್ದಳು.. ಹಾಗೇ ತನ್ನನ್ನು ಯಾರಾದ್ರೂ ನೋಡುತ್ತಿದ್ದಾರಾ ಎಂದು ಒಮ್ಮೆ ಗಮನಿಸುತ್ತಿದ್ದಳು. ಎಷ್ಟಾದ್ರೂ ಮಲೆನಾಡಿನ ಹೆಣ್ಣು ಮಕ್ಕಳಿಗೆ ಅವರ ಸೌಂದರ್ಯ ಪ್ರಜ್ಞೆಯ ಜೊತೆಗೆ ತಮ್ಮ ಇಮೇಜಿಗೆ ಎಲ್ಲಿ ತೊಂದರೆ ಆದೀತೋ ಎಂಬ ಭಯ ಮತ್ತು ಕಾಳಜಿಯೂ ಇರುತ್ತದೆ.

ಮಳೆ ಸ್ವಲ್ಪ ಕಡಿಮೆ ಆಯಿತು.. ಅಲ್ಲಿ ನೆರೆದವರೆಲ್ಲ ಹೊರಟಿದ್ದಾರೆ.ಆದರೆ ರಾಜೇಶ್ ಗೆ ಶಾಂತಿಯನ್ನು ಬಿಟ್ಟು ಹೊರಡಲು ಮನಸ್ಸೇ ಬರ್ತಿಲ್ಲ..! "ವೈದ್ಯರು ಹೇಳಿದ್ದೂ ಹಾಲ್ ಅನ್ನ ರೋಗಿ ಬಯಸಿದ್ದೂ ಹಾಲು-ಅನ್ನ" ಎಂಬಂತೆ ಅದೇ ಸಮಯಕ್ಕೆ ಸರಿಯಾಗಿ ಮತ್ತೆ ಮಳೆ ಶುರುವಾಯಿತು. ತಥ್ ತೇರಿಕಿ..! ಅಲ್ಲಿ ಸತ್ಯ ನಾರಾಯಣ ಪೂಜೆಗೆ ಬಂದವರ ಪೈಕಿ ಉಳಿದವರು ಶಾಂತಿ ಮತ್ತು ರಾಜೇಶ್ ಹಾಗೂ ಶಾಂತಿಯ ಗೆಳತಿಯರು... ಇಲ್ಲಿದೆ ನೋಡಿ ತಳಮಳ.. ಕನ್ ಫ್ಯೂಷನ್..ಟೆನ್ ಷನ್...ಹಂಬಲ...ಎಲ್ಲ..ಮಿಕ್ಸ್ ಆಗಿ ಇವರಿಬ್ಬರ ಅಂತರಂಗದ ಮೃದಂಗ.." ಧೀಂ ತಕಿಟ..ತಕಿಟ....ಧೀಂ.. ತಕಿಟ ಎಂದಿತು.

ಹಿಂದಿನಿಂದ ಯಾರೋ ಕೂಗಿದರು. " ರಾಜೇಶ್ ಎಲ್ಲರಿಗೂ ಕಾಫಿಕೊಡು ..ಬಾ" ಅವರ್ಯಾರೋ ಮಾತಿನಂತೆ ರಾಜೇಶ್ ಎಲ್ಲರಿಗೂ ಕಾಫಿ ಕೊಡಲು ಮುಂದಾದ. ಹಾಗೆಯೇ ಶಾಂತಿಯ ಬಳಿ ಹೋದಾಗ ಅವಳು ನಾಚುತ್ತ ಕಾಫಿ ಲೋಟ ತೆಗೆದುಕೊಂಡಳು. ಇವನು ಶಾಂತಿಯ ಕಣ್ಣುಗಳನ್ನು ಅಲ್ಲೇ ಹತ್ತಿರದಿಂದ ಆಗಲೇ ನೋಡಿದ್ದು. ಆಗಲೇ ಅಂದುಕೊಂಡ 'ಹೆಣ್ಣೆ ನಿನ್ನ ಕಣ್ಣಿನಲ್ಲಿ ಅನುರಾಗದ ಆಲಾಪನೆ.. ಕಂಡೆನಾ" ಹಾಗಂತ ಆ ಕ್ಷಣದಲ್ಲಿ ತುಂಟತನದಿಂದ ಹಾಡಿದನು...!

ಈ ದಿನ ರಾಜೇಶ್ ಮತ್ತು ಶಾಂತಿ ಒಬ್ಬರನ್ನೊಬ್ಬರು ಪದೇಪದೇ ಕದ್ದು-ಕದ್ದು ನೋಡುತ್ತಿದ್ದುದನ್ನು ಶಾಂತಿಯ ಪಕ್ಕದ ಮನೆಯ ಅಂಕಲ್ ನೋಡಿಯೇ ಬಿಟ್ಟರು. ಶಾಂತಿಯ ಜೊತೆಯಲ್ಲಿ ಆ ಪೂಜೆಗೆ ಬಂದಿದ್ದ ಗೆಳತಿಯರೆಲ್ಲಾ ಹೊರಡುವ ವೇಳೆಗೆ ಶಾಂತಿಯನ್ನು ಕೂಗಿದರು. ಆಗ ಸ್ವಲ್ಪ ಮಳೆ ಕಡಿಮೆ ಆಗುತ್ತಿತ್ತು...ಅವರ ಮಾತಿನಂತೆ ಶಾಂತಿಯು ಅವರ ಜೊತೆಯಲ್ಲಿ ಹೊರಟಳು. ರಾಜೇಶ್ ಅಲ್ಲಿಯೇ ಶಾಂತಿಯನ್ನು ನೋಡುತ್ತ ನಿಂತಿದ್ದಾನೆ.

"ಮಳೆ ನಿಂತರೂ..ಮರದ ಹನಿ ನಿಂತಿರಲಿಲ್ಲ.." ಇವರಿಬ್ಬರೂ ಒಬ್ಬರನ್ನೊಬ್ಬರು ಅಂದು ಕದ್ದು-ಕದ್ದು ನೋಡಿದ್ದು ..ಊಟ ಬಡಿಸಿದ್ದು, ಕಾಫಿ ಕೊಟ್ಟಿದ್ದು, ಹಾಡು ಹೇಳಿದ್ದು ಎಲ್ಲಾ ಈಗ ರಾಜೇಶ್ ಮತ್ತು ಶಾಂತಿ ಎದೆಯಲ್ಲಿ ತಕಧಿಮಿ ಹಾಡಿ ಕುಣಿಯಲು ಶುರುವಾಯಿತು.

-ಇಂತಿ "ಎಳೆಯ ಹೃದಯಗಳಿಗೆ ಪ್ರೀತಿಯ ಅಮೃತ ಉಣಿಸುವ"
ಕವೀಶ್ ಶೃಂಗೇರಿ ಮೊ: 9945342433

ಭಾವಾಂತರಂಗ -೫

"ಬೆಳದಿಂಗಳಾಗಿ ಬಾ. .. ."

ಎರಡು ದಿನ ಆಯ್ತು.. ಊಟ ಸೇರ್ತಿಲ್ಲ.. ನಿದಿರೆ ಅಂತೂ ಮರತೇ ಹೋಗಿದೆ ಬಿಡಿ.. ಯಾಕೆ ಅಂತ ಮನಸ್ಸನ್ನು ಕೇಳಿದ್ರೆ ಬಾಯಿ ಬಿಡ್ಲಿಲ್ಲ. .. ಸರಿ ನಿನ್ನೆ ರಾತ್ರಿ 12.30 ಕ್ಕೆ ಮನೆಗೆ ಹೋದ ಮೇಲೆ ನನ್ ಮನಸ್ಸನ್ನು ಪರ್ಸನಲ್ ಡೈರಿ ಮುಂದೆ ಕೂರಿಸಿ, ಮನಸಿಗೆ 90 ಕೋಡೇಸ್ ರಮ್ ಕುಡಿಸಿ ಏನಾಯ್ತು ಹೇಳು ಮನಸೇ ಅಂಥ ಕೇಳಿದಾಗ.. ಅದು ಯಾರಿಗೂ ಅರ್ಥವಾಗದ ರೀತಿಯಲ್ಲಿ ಎರಡು ಲೈನ್ ಗೀಚಿ-ಗೀಚಿ ಮುಗುಳ್ ನಕ್ಕಿತು.. ಕೊನೆಗೂ ಆ ಮುಗುಳ್ ನಗೆ ಆರ್ಥ..ಅರ್ಥ ಆಗ್ಲೇ ಇಲ್ಲಾ..

ಇದಕ್ಕ್ಕೆಲ್ಲಾ ಕಾರಣ ಇಲ್ಲಿದೆ ನೋಡಿ..ಜೋರಾದ ಉಸಿರಾಟದೊಂದಿಗೆ ಹೆದರುತ್ತ ನನಗೆ ಅಂದು ಫೋನ್ ಮಾಡಿ ನನ್ನೆದೆಗೆ ಕಚಗುಳಿ ಇಟ್ಟ' ಸಂಯಮಾ'ಳ ಮಾತು ಹೀಗಿತ್ತು..... "ನೆನಪಾಯ್ತು ಅದ್ಕೆ ಫೋನ್ ಮಾಡಿದೆ.. ಯಾಕೆ ಮಾಡಬಾರದಿತ್ತ.." ಅಂದಳು 'ಸಂಯಮ; ನಾನು "ರೀ ..ರೀ.. ಯಾಕ್ ಹೆದರುತಾ ಇದ್ದೀರಾ... ಚೆನ್ನಾಗಿದ್ದೀರಾ..?" ಅಂದೆ. ಅದಕ್ಕೆ ಸಂಯಮಾ ಹೇಳಿದ್ದು.. " ಇಲ್ಲಾ ಚೆನ್ನಾಗಿಲ್ಲ. ನೀವು ನನ್ನ ನೋಡೋಕೆ ಬಂದಿಲ್ವಲ್ಲಾ" ಅಂದಳು. ಅವಳ ಆ ಮಾತಿಗೆ ನಾನು ಏನಂತಾ ಹೇಳಬೇಕು ತಿಳಿಯಲಿಲ್ಲ... ಕಾರಣ " ನಾನಿನ್ನು ಆ 'ಸಂಯಮಾಳನ್ನು ನೋಡಿಲ್ಲ ಸಂಯಮ ಬೆಳದಿಂಗಳ ಬಾಲೆ" ಆ ದಿನ ಫೋನ್ ನಲ್ಲಿ ನಡೆದ 5 ನಿಮಿಷದ ಸಂಭಾಷಣೆ ಇನ್ನೂ ನನ್ನ ಅಂತರಂಗದಲ್ಲಿ ಮೃದಂಗವೊಂದು ಥೋಂ.. ಥೋಂ... ಎಂದು ಬಡಿದಂತೆ ಆಗುತ್ತಿದೆ...!

ಒಂದು ಸಾರಿ ಸಂಯಮಾಳಿಂದ ಫೋನ್ ಬಂದಾಗ ಅವಳ ಆ ಮಾತನ್ನು ಕೇಳಿ ಅವಳಿಗೆ ಬುದ್ಧಿ ಹೇಳಲಾಗಸ ಸ್ಥಿತಿಯಲ್ಲಿ ನಾನಿದ್ದೆ. ಆಗ ಆ ಸಂಭಾಷಣೆ ಹೀಗಿತ್ತು." ನನ್ನ ಮೊಬೈಲಿನಲ್ಲಿ ಕರೆನ್ಸಿ ಇಲ್ಲ. 5 ರೂಪಾಯಿ ಇದೆ. ಅದು ನಿಮ್ಮ ಹತ್ರ ಮಾತನಾಡುವಾಗಲೇ ಕರೆನ್ಸಿ ಖಾಲಿ ಆಗಲಿ" ಹೀಗೆಂದು ಪ್ರತಿಸಾರಿ ಅವಳ ಮೊಬೈಲ್ ಕರೆನ್ಸಿ ನನ್ನ ಬಳಿ ಮಾತನಾದಲು ಮೀಸಲಿಡುತ್ತಿದ್ದಳು ಸಂಯಮ.

ಅಬ್ಬಾ.. ಸಂಯಮಾಳ ಆ ಪ್ರೀತಿಯ ಮುಂದೆ ಈ ಕವಿಯ ಗುಂಡಿಗೆ ಪೀಸ್...ಪೀಸ್....! ಪ್ರತಿದಿನ ಸೂರ್ಯ ಹುಟ್ಟುತ್ತಾನೋ ಇಲ್ಲವೋ ಗೊತ್ತಿಲ್ಲ ಆದ್ರೆ ಸಂಯಮ ಅವರಿಂದ ಬೆಳಿಗ್ಗೆ ಗುಡ್ ಮಾರ್ನಿಂಗ್ ಮೆಸೇಜ್ ಬಂದೇ ಬರುತ್ತೆ.. ಮಧ್ಯಾಹ್ನ ಆದ್ರೆ "ಊಟ ಮಾಡಿ...ಇನ್ನೂ ಯಾಕೆ ಊಟ ಮಾಡಿಲ್ಲ.. ಟೈಮ್ ಗೆ ಸರಿಯಾಗಿ ಊಟ ಮಾಡಬಾರದಾ? ಹೆಲ್ತ್ ನ ಹೀಗೆಲ್ಲಾ ಹಾಳ್ ಮಾಡ್ಕೋಂತಾರಾ..?" ಅಂತ ಫೋನ್ ಮಾಡ್ತಾಳೆ. ರಾತ್ರಿ ಆದೆ "ರೀ ಇವತ್ತು ಕುಡಿಬೇಡಿ... ಬೇಗ ಮನೆಗೆ ಹೋಗಿ ಊಟ ಮಾಡಿ ಮಲ್ಕೊಳ್ಳಿ..ಕುಡಿಬೇಡಿ ಪ್ಲೀಸ್ ನಾನು ಮತ್ತೆ 15 ನಿಮಿಷದ ನಂತರ ಫೋನ್ ಮಾಡ್ತೀನಿ. ಅಷ್ಟೊತ್ತಿನೊಳಗೆ ಊಟ ಮಾಡಿ ಮಲಗೋಕೆ ರೆಡಿ ಆಗಿ.... ಇಲ್ಲಾಂದ್ರೆ ನಾನೂ ಊಟ ಮಾಡಲ್ಲ.. ಅಷ್ಟೇ" ಹೀಗಂತ ಹೇಳಿ.. ಮತ್ತೆ 15 ನಿಮಿಷದ ನಂತರ ಫೋನ್ ಮಾಡಿ " ಊಟ ಆಯ್ತಾ? ಸರಿ ರಾತ್ರಿ ಎಲ್ಲಾ ಬರೆಯುತ್ತಾ ಕೂತೀರ್ ಬೇಡಿ ಬೇಗ ಮಲಗಿ ಬೇಗ ಏಳಿ.... ಗುಡ್ ನೈಟ್ ಅಂತ ಹೇಳಿ ಫೋನ್ ಕಟ್ ಮಾಡ್ತಾಳೆ... ಸಂಯಮ.

ರಾತ್ರಿ 2.30ಕ್ಕೆ ಮತ್ತೆ ಫೋನ್ ಮಾಡಿ "ರೀ .. ನಿದ್ರೆ ಬರ್ತಾ ಇಲ್ಲಾ ಪ್ಲೀಸ್ ಒಂದ್ ಡೈಲಾಗ್ ಹೇಳ್ತೀರಾ..ಮತ್ತೊಂದು ಹಾಡು...." ಹೀಗೆ ಅವಳು ನನ್ನಿಂದ ಡೈಲಾಗ್.. ಹಾಡು.. ಹೇಳಿಸಿಕೊಂಡು ನನ್ನ ಹಾಡಿನೊಂದಿಗೆ ಸಂಯಮ ನಿದ್ರೆ ಹೋಗ್ತಾಳೆ...!

ಬೆಳಗಾದ್ರೆ ಮತ್ತದೇ ಗುಡ್ ಮಾರ್ನಿಂಗ್ ಮೆಸೆಜ್ ಅದರ ಜೊತೆಗೆ ಮತ್ತೊಂದು ಮೆಸೆಜ್ "ರಾತ್ರಿ ನನಗೆ ಬಿದ್ದ ಕನಸು ನಿಮಗೂ ಬಿದ್ದಿದ್ದಿದ್ರೆ ..ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ" ಅಮ್ತ ಮೆಸೆಜ್ ಮಾಡ್ತಾಳೆ. "ಅದೆಂಥ ಕನಸು ರೀ.. ನನಗೂ ಸ್ವಲ್ಪ ಹೇಳಿ" ಅಂತ ನಾನು ಕೇಳಿದ್ರೆ

"ರೀ ..ಸುಮ್ನಿರಿ...ನನ್ಗೆ ನಾಚಿಕೆ ಆಗುತ್ತೆ" ಅಂತಾಳೆ.. ಅವಲು ನನಗೋಸ್ಕರ ಒಂದು ಬಿಎಸ್ ಎನ್ ಎಲ್ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾಳೆ. ಅವಳ ಹತ್ತಿರ ಎರಡು ಮೊಬೈಲ್ ಇದೆಯಂತೆ. ಬಿಎಸ್ಸೆನ್ನೆಲ್ ಸಿಮ್ ಗೆ ಅವಳಿಗೆ ಬೇರೆ ಯಾವ ಕರೆಯು ಬರುವುದಿಲ್ಲ. ಒಂದು ವೇಳೆ ಆ ಬಿಎಸ್ಸೆನ್ನೆಲ್ ಮೊಬೈಲ್ ರಿಂಗ್ ಆದರೆ ಅದು ನನ್ನದೇ ಫೋನ್ ಅಂತ ಕನ್ ಫರ್ಮ್ ಅಂತೆ. ಹಾಗಂತ ಅವಳೆ ಹೇಳಿದಳು. "ರೀ ...ನನ್ನ ಮೊಬೈಲ್ ನಲ್ಲಿ ನಾನು ನಿಮ್ಮ ಹೆಸರನ್ನು ಫೀಡ್ ಮಾಡಿಕೊಂಡಿಲ್ಲ.. ಬದಲಿಗೆ "ನನ್ನವನು" ಅಂತ ನಿಮ್ಮ ನಂಬರ್ ಫೀಡ್ ಮಾಡಿಕೊಂಡಿದ್ದೇನೆ. ನೀವೂನೂ "ನನ್ನವಳು" ಫೀಡ್ ಮಾಡ್ಕೊಳ್ಳಿ" ಹಾಗಂತ ಹೇಳಿದಳು ಸಂಯಮ. ಅವಳ ಈ ಮಾತನ್ನು ಕೇಳಿ ನನ್ನ ಬರವಣಿಗೆಗೂ ನಿಲುಕದ ಭಾವನೆ ಹಾಡಾಗಿಯೇ ಬಿಟ್ಟಿತು.

ಆತ್ಮಗಳ ಆಕರ್ಷಣೆಗೆ..
ಮೌನದ ಈ ಸಂಭಾಷಣೆಯೇ...
ಸೂಚನೆ ...ಸೂಚನೆ...ಸೂಚನೆ..
ಪ್ರೀತಿ ಎಂದರೆ
ಎರಡು ಮನಗಳ
ಮಧುರ ಭಾವನೆ
ಪ್ರೀತಿ ಎಂದರೆ
ನಾಲ್ಕು ಕಂಗಳ
ಮಧುರ ಯಾತನೆ
ಹೃದಯಾನೆ ಇದರ ಅರಮನೆ....
ಭಾವನೆಯೇ ಇದರ ಸೆರೆಮನೆ...


ಇಷ್ಟು ದಿನವಾದರೂ ನಾನಿನ್ನೂ ಸಂಯಯಾಳನ್ನು ನೋಡಿಲ್ಲ. ನೋಡುವ ಪ್ರಯತ್ನವನ್ನೂ ಮಾಡಿಲ್ಲ. ಅವಳ ಆ ಮೊಬೈಲ್ ನಂಬರ್ ಯಾರ ಹೆಸರಲ್ಲಿದೆ ಅಂತ ಕಂಡೂ ಹಿಡಿಯುವ ಪ್ರಯತ್ನವನ್ನು ಮಾಡಿಲ್ಲ.

ಒಂದಂತೂ ಸತ್ಯ " ಅವಳ ಆ ಪ್ರೀತಿಯ ಅರಮನೆ ಬಹಳ ದೊಡ್ಡದು. ಆ ಅರಮನೆ ಛಾವಡಿಯಲ್ಲಿ ನಾವಿಬ್ಬರು ಜೊತೆಯಾಗಿ ಕುಳಿತು ಬೆಳದಿಂಗಳ ಸವಿ ಸವಿಯುವ ಆಸೆ ಸಂಯಾಳದ್ದು.." ಆದರೆ..ಈ ಕವಿಗೆ ತನ್ನನ್ನು ಮತ್ತು ಬರವಣಿಗೆಯನ್ನು ಪ್ರೀತಿಸುವ ಸಂಯಮ ಎಲ್ಲಿ ಕಿತ್ತು ಕೊಳ್ತಾಳೋ ಎಂಬ ಭಯದೊಂದಿಗೆ, ನನ್ನೆದೆ ಒಳಗಡೆ ಸಂಗಾತಿಗೆ ಅಂತ ಇರುವ ಬೆಚ್ಚನೆಯ ಪ್ರೀತಿಯಲ್ಲಿ ಅವಳು ಎಲ್ಲಿ ಕರಗಿ ಹೋಗ್ತಾಳೋ ಎನ್ನುವ ಭಯವಿದೆ.....

"ಸಂಯಮ ಅವರೆ... ನಾನು ಒಂದು ಚಿಕ್ಕ ಸಲಹೆ ಕೊಡ್ತೀನಿ...ತಾಳ್ಮೆ ಇದ್ರೆ ಕೇಳಿ.... ನಾನಿನ್ನೂ ನಿಮ್ಮನ್ನು ನೋಡಿಲ್ಲ...ಆದ್ರೆ ನಿಮ್ಮ ರೂಪ ೦ಗುಣ ಎಲ್ಲವೂ ನಾನು ಅರಿಯಬಲ್ಲೆ ನನ್ನ ಲೈಫ್ ಗಾಳಿಗೆ ಸಿಕ್ಕ ಗಾಳಿಪಟ ಆಗಿದೆ.. ನೀವು ನಿಮ್ಮ ಅಪ್ಪ -ಅಮ್ಮ ತೋರಿಸಿದ ಹುಡುಗನನ್ನು ನೋಡಿ ಮದುವೆಯಾಗಿ ಚೆನ್ನಾಗಿರಿ.. ಪ್ಲೀಸ್ ನನ್ನೂ ನಿಮ್ಮ ಮದುವೆಗೆ ಕರೀರಿ.. ಕರಿತೀರಾ ತಾನೆ.. ಯಾಕೆಂದ್ರೆ ನಾನೂ ನಿಮ್ಮನ್ನೂ ಒಂದ್ಸಾರಿಯಾದ್ರೂ ನೋಡಬೇಕು ಅನಿಸ್ತಾ ಇದೆ....!

ಇಂತಿ -ಬರವಣಿಗೆಗೂ ನಿಲುಕದ ಭಾವನೆ
-ಕವೀಶ್ ಶೃಂಗೇರಿ-99453 42433

ಭಾವಾಂತರಂಗ -೪

"ಸುಮಾಳ ನೆನಪಲ್ಲಿ ಸುಮ್ ಸುಮ್ನೆ"

ನಾನು ಪಿಯುಸಿ ಓದುತ್ತಿದ್ದ ಆ ದಿನಗಳಲ್ಲಿ ಕ್ಲಾಸ್ ಗೆ ಟೈಮ್ ಆಯ್ತು ಎಂದು ಅವಸರದಿಂದ ಹೋಗುತ್ತಿದ್ದೆ. ನಮ್ಮ ಕಾಲೇಜಿನ ಬಳಿ ಸ್ವಲ್ಪ ದೂರದಲ್ಲಿ ಒಂದು 'ಕಾಳಿಕಾಂಬ' ದೇವಸ್ಥಾನ ಇದೆ. ಅಲ್ಲಿ ಹೋಗುತ್ತಿರುವಾಗ ನನ್ನ ಕಣ್ಣಿಗೆ ನನ್ನ ಕ್ಲಾಸ್ ಮೆಟ್ 'ಸುಮ' ಕಂಡಳು. ನಾನು ಅವಳನ್ನು ನೋಡಿದರೂ ನೋಡದಂತೆ ನನ್ನ ಪಾಡಿಗೆ ನಾನು ಮುಂದೆ ಸಾಗುತ್ತಿದ್ದೆ... ಅಷ್ಟರಲ್ಲಿ ಒಂದು ಧ್ವನಿ "ಗುಡ್ ಮಾರ್ನಿಂಗ್ ಕೈ" ಎಂದಿತು! ನಾನು ತಲೆ ಎತ್ತಿ ನೋಡಿದೆ ಅದು ಸುಮಾಳ ಧ್ವನಿಯಾಗಿತ್ತು. ನಾನು " ವೆರಿ ಗುಡ್ ಮಾರ್ನಿಂಗ್.." ಅಂತ ಹೇಳಿ ಮುಂದೆ ಸಾಗುವಷ್ಟರಲ್ಲಿ ಸುಮ ನನ್ನ ಬಳಿ ಸಮೀಪಿಸಿ ನನ್ನ ಕೈಗೆ ಒಂದು ಲೆಟರ್ ಕೊಟ್ಟಳು...! ನಾನು "ಏನಿದು..?" ಎಂದೆ. ಆಗ ಅವಳು "ಕ್ಲಾಸ್ ಮುಗಿದ ಮೇಲೆ ಓದಿ..." ಎಂದಳು. ನಾನು ನಗುತ್ತಲೇ "ಏಮ್ ಕವನಾನಾ...? ಕಥೆನಾ..? ಕಾದಂಬರಿನಾ...?" ಎಂದು ಆ ಲೆಟರನ್ನು ಜೇಬಿನಲ್ಲಿ ಭದ್ರವಾಗಿ ಇರಿಸಿಕೊಂಡೆ.

ನಮ್ಮ ಕ್ಲಾಸ್ ರೂಂಗೆ ನಾವಿಬ್ಬರೂ ಒಟ್ಟೀಗೆ ಎಂಟ್ರಿ ಕೊಟ್ಟೆವು. ಆಗ ಕ್ಲಾಸ್ ಶುರುವಾಗಿತ್ತು. ನಮ್ಮಿಬ್ಬರನ್ನು ಒಟ್ಟಿಗೆ ನೋಡಿದ ನನ್ನ ಗೆಳೆಯರಿಗೆ ಖುಷಿಯೇ ಖುಷಿ. ಗೆಳೆಯರೆಲ್ಲಾ ನನಗೆ ಯಾವಾಗಲೂ ತಮಾಷೆ ಮಾಡುತ್ತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಅವರ ತಮಾಷೆಗೆ ಮತ್ತೊಂದು ವಸ್ತು ಸಿಕ್ಕಂತಾಯಿತು. ನನ್ನ ಗೆಳೆಯರಿಗೇನೋ ಈ ವಿಷಯ ತಮಾಷೆಯಾಗಿತ್ತು. ಆದ್ರೆ ಇದರಿಂದಾಗಿ ಮುಂದೆ ಆದ ಅನಾಹುತವನ್ನು ಈಗಲೂ ನೆನೆದರೆ ಅಬ್ಬಾ... .ಈಗಲೂ ಮೈ ಜುಂ ಎನ್ನುತ್ತದೆ.

ಅವಳು ಅಂದು ನನ್ನ ಕೈಗೆ ಕೊಟ್ಟಿದ್ದು "ಲವ್ ಲೆಟರ್" ಆಗಿತ್ತು. " ಮುದ್ದಿಸೋ ಮುದ್ದಿನ ಅಕ್ಷರದಿಂದ ಎಳೆಯ ಹೃದಯಕ್ಕೆ ನೇರವಾಗಿ ಬಂದು ತಬ್ಬಿಕೊಂಡು ಒಂದು ಕಿಸ್ ಕೊಟ್ಟ ಹಾಗಿತ್ತು, ಆ ಪತ್ರದ ಭಾವ." ಸುಮ ಅವರ ಮನೆತನ ಸ್ವಲ್ಪ ಹೆಸರುವಾಸಿಯಾಗಿದ್ದು ಅವರಪ್ಪನ ಹೆಸರು ಹೇಳಿದ್ರೆ ಎಲ್ಲರೂ ಹೆದರುತ್ತಲೇ ಗೌರವಿಸುತ್ತಾರೆ. ಅವಳಿಗೆ ಒಬ್ಬನೇ ಅಣ್ಣ ಸುಧೀರ. ತಂಗಿ ಅಂದ್ರೆ ಅವನಿಗೆ ಪ್ರಾಣ. ಸುಧೀರ ತನ್ನ ತಂಗಿ ಸುಮಾಳನ್ನು ಇದುವರೆಗೂ ಕೆಣಕಿದವಾರನ್ನು ಸುಮ್ಮನೆ ಬಿಟ್ಟಿರಲಿಲ್ಲ. ಆದರೆ ಅದೀಗ ನನ್ನ ಸರದಿಗೆ ಬಂದೇ ಬಿಟ್ಟಿತು.

ನಮ್ಮ ಕಾಲೇಜಿನಲ್ಲಿ ಇಷ್ಟೊತ್ತಿಗಾಗಲೇ ಗೋಡೆ ಮೇಲೆ, ಕಾಲೇಜಿನ ಕಾಂಪೌಂಡ್ ನಲ್ಲಿರುವ ಮರದ ಮೇಲೆ ನನ್ನ ಹೆಸರಿನ ಜೊತೆ ಸುಮಾಳ ಹೆದರನ್ನು ಸೇರಿಸಿ ನನ್ನ ಕೆಲವು ಸ್ನೇಹಿತರು ನನ್ನ ಕೆಣಕಲೆಂದೇ ಬರೆದಿದ್ದರು. ಇದನ್ನು ನಮ್ಮ ಕನ್ನಡ ಉಪನ್ಯಾಸಕಿ ನಯನ ಮೇಡಂ ನೋಡಿ ನನ್ನ ಕರೆದು "ಏನಿದು..?" ಅಂದರು. ನಾನು " ಯಾವುದು..?" ಎಂದೆ ...ಅವರು ಕೋಪಗೊಂಡು "ತಮಾಷೆ ಬೇಡ ನಿನ್ಗೆ ಕೇಳಿದ್ದು. . ." ಎಂದು ಗೋಡೆಯ ಕಡೆಗೆ ಕೈ ಬೆರಳು ತೋರಿಸಿದರು. ಆಗಲೇ ನನಗೆ ಕರೆಂಟ್ ಹೊಡೆದ ಅನುಭವ ಆಗಿದ್ದು...!ನನಗೆ ಅಲ್ಲಿಯವರೆಗೂ ಈ ಸುಮಾಳ ಹುಡುಗಾಟ ನನ್ನ ಗೆಳೆಯರ ತಮಾಷೆತಾಗಿ. ನಯನ ಮೇಡಂ ಅವರ ಕಣ್ಣಿಗೆ ನಾನು ಬೀಳುತ್ತೇನೆಂಬ ಅರಿವೇ ಇರಲಿಲ್ಲ. ... .

ಅಂದು ನಯನ ಮೇಡಂ ಕೇಳಿದ ಪ್ರಶ್ನೆಗಳಿಗೆಲ್ಲಾ ನಾನು ಕೊಟ್ಟ ಉತ್ತರ ಒಂದೇ ಆಗಿತ್ತು.. "ಮೇಡಂ ಈ ವಿಚಾರವಾಗಿ ನಿಮಗೆ ಎಷ್ಟು ಗೊತ್ತೋ ನನಗೂ ಅಷ್ಟೇ ಗೊತ್ತು.." ಎಂದು ಹೇಳಿದೆ. ಇದುವರೆಗೂ ಆಗಿದ್ದು- ಸ್ವಲ್ಪ ಬೋರ್ ಹೊಡೆಸುವ ಸಾಮಾನ್ಯ ವಿಷಯ ಇನ್ನು ಮುಂದೆ ಇರೋದು ಕುತೂಹಲದ ಜೊತೆಗೆ ಭಯ... !

ನಯನ ಮೇಡಂ ನನ್ನ ಕೂರಿಸಿಕೊಂಡು ಆ ಹುಡುಗಿಯ ಮನೆತನದ ಬಗ್ಗೆ ನನಗೆ ವಿವರಿಸುತ್ತಾ... ನನಗೆ ಪ್ರಾಣಭಯ ಉಂಟಾಗುವ ಸಂಭವವಿದೆ ಎಂದು ಹೇಳಿದರು. "ನೀನು ಈ ಕಾಲೇಜು ಬಿಟ್ಟು ದೂರ ಎಲ್ಲಾದ್ರೂ ಹೋಗಿ ಚೆನ್ನಾಗಿ ಓದು. ನೀನು ಒಳ್ಳೆ ಹುಡುಗ. ನನಗೆ ನಿನ್ನ ಬಗ್ಗೆ ಚೆನ್ನಾಗಿ ಗೊತ್ತು. ಅದ್ರೆ ನಿನ್ಗೆ ಒಳ್ಳೇದಕ್ಕೆ" ಎಂದು ಹೇಳಿದರು. ಅಲ್ಲಿಯವರೆಗೆ ನಾನು ಎನೂ ಆಗೆ ಇಲ್ಲ ಎಂದುಕೊಂಡಿದ್ದೆ. ಈಸ್ಗ ಶುರುವಾಯಿತು ನೋಡಿ ಈ ಸಮಯದಲ್ಲಿ ನನಗೆ ಬಂದ ಕೋಪ ಈಗಲೂ ನೆನಸಿಕೊಂಡರೆ ಅಲ್ಲೋಲ-ಕಲ್ಲೋಲ..! ಆ ನನ್ನ ಕೋಪಕ್ಕೆ ಬಲಿಯಾದದ್ದು ನಯನ ಮೇಡಂ... ನನ್ನ ಗೆಳೆಯರು..ಎಂದೂ ನನ್ನ ಬಾಯಿಂದ ಬರದ ಅವಾಚ್ಯ ಶಬ್ದಗಳು ಅಂದು ನನ್ನ ಕಂಟ್ರೋಲ್ ದಾಟಿ ಈಚೆಗೆ ಬಂದೇ ಬಿಟ್ಟವು..!

"ಯಾವನೋ ರತ್ನಾಕರ್ ಗೌಡ ಅಂತೆ.. ಅವ್ನ ಮಗ ಸುಧೀರ್ ಅಂತೆ ಅವ್ನ ತಂಗೀನಾ ನಾನ್ ಲವ್ ಮಾಡ್ತೀದ್ದೀನಂತೆ. ಅವ್ಳೇನ್ ತ್ರಿಪುರ ಸುಂದ್ರೀನಾ. ಅಲ್ಲಾ ಅವ್ಳು ಮಾಡಿದ ತಪ್ಪಿಗೆ ನಾನ್ ಊರನ್ನೇ ಬಿಟ್ಟು ಎಲ್ಲಾದ್ರೂ ಹೋಗಬೇಕಂತೆ.....ಅಲ್ಲಾ ಮೇಡಮ್ ನಿಮಗಾದ್ರೂ ಬುದ್ಧಿ ಬೇಡ್ವಾ.. ನಾನೇನು ಕಳ್ಲಾನಾ.... .ಓಡೋಗಕ್ಕೆ. ಆ ಹುಡ್ಗೀದೆ ಎಲ್ಲಾ ತಪ್ಪು.. ತಪ್ಪೋ -ಸರೀನೋ...ಅದ್ಕೆ ಸುಮಾಳ ಮನೆಯವ್ರಿಗೆ ಹೆದರಿಕೊಂಡು ನಾನ್ ಊರು ಬಿಟ್ಟು ಹೋಗ್ ಬೇಕಾ.. ಇಂಪಾಸಿಬಲ್.. " ಎಂದು ಹುಚ್ಚನ ರೀತಿ ಬಾಯಿಗೆ ಬಂದಂತೆ ಕೂಗಾಡಿದೆ.

ಈ ಸಮಯದಲ್ಲಿ ಸುಮ ಅವಳ ಮನೆಯವರಿಂದ ಅದೇನು ಕಿರುಕುಳ ಅನುಭವಸಿದ್ದಳೋ ಗೊತ್ತಿಲ್ಲ. ನಾನು ಅದನ್ನು ಗಮನಿಸಿದೆ. ಆಗ ಸುಮ ಏನೋ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದಾಳೆಂದು ನನಗೆ ಗೊತ್ತಾಯಿತು. ನಂತರ ಕಾಲೇಜ್ ಮುಗಿದ ಮೇಲೆ ನಾನು ನನ್ನ ಮನೆಗೆ ಬಂದೆ. ತಕ್ಷಣ ಸುಮ 'ಏನೋ ತೊಂದ್ರೇಲಿ ಇರಬೇಕು. ಏನಾದ್ರೂ ಆಗಲಿ ಅವಳ ಮನೆಗೆ ಬೇರೆ ಹೆಸರಿನಿಮ್ದ ಒಂದು ಫೋನ್ ಕರೆ ಮಾಡಲು ನಿರ್ಧರಿಸಿ ಫೋನ್ ಮಾಡಿಯೇ ಬಿಟ್ಟೆ. ಆಗ ಅವಳ ತಾಯಿ ಫೋನ್ ರಿಸೀವ್ ಮಾಡಿದರು."ಸುಮಾ ಇದಾರಾ...?" ಅಂತ ಕೇಳಿದೆ. ಅದಕ್ಕೆ ಅವರು " ಇಲ್ಲಾ ಇನ್ನೂ ಕಾಲೇಜ್ ನಿಂದ ಬಂದಿಲ್ಲ. ಇಷ್ಟೊತ್ತಿಗೆ ಬರಬೇಕಾಗಿತ್ತು. ತಾವು ಯಾರು..?" ಎಂದರು. ನಾನು ತಕ್ಷಣ ಫೋನ್ ಇಟ್ಟು ನನ್ನ ತಾಯಿಗೆ ಈ ವಿಷಯ ವಿವರಿಸಿ ಸುಮಾಳಿಗೆ ಈ ಸಮಯದಲ್ಲಿ ಏನೋ ಅಪಾಯ ಕಾದಿದೆ ಅವಳು ಅತ್ಮಹತ್ಯೆಗೆ ಪ್ರಯತ್ನಿಸಿದರೆ ತೊಂದರೆ ಆದೀತು. ಅವಳು ಒಂದು ದಿನ ನನ್ನ ಬಳಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದರೆ ತೊಂದರೆ ಆದೀತು. ಅವಳು ಒಂದು ದಿನ ನನ್ನ ಬಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮಾಷೆಗಾಗಿ ಹೇಳಿದ್ದಳು. ಆಗ ನನಗೆ ಅವಳು ಅಂದು ಹೇಳಿದ ಆತ್ಮಹತ್ಯೆಯ ವಿಷಯ ಅರಿವಾಗಿ ತಕ್ಷಣ ಶೃಂಗೇರಿ ಹೊಳೆಯ ಬಳಿ ಹೋಗಿದ್ದೆ. ಆ ಸಮಯದಲ್ಲಿ ಒಂದು ಕಲ್ಲು ಬಂಡೆಯ ಮೇಲೆ ಅಳುತ್ತಾ ಕುಳಿತ್ತಿದ್ದಳು. ಅವಳನ್ನು ಆತ್ಮಹತ್ಯೆಯಿಂದ ಮನ ಒಲಿಸೊ ಹೊರತಂದೆ. ಅಬ್ಬಾ ಸಾಕೇ ಸಾಕಾಯ್ತು. ನಂತರ ಅವಳ ಮನೆಗೆ ಕಳುಹಿಸಿಕೊಟ್ಟೆ.ಮುಂದೆಂದೂ ಸುಮ ಆತ್ಮಹತ್ಯೆಗ್ ಪ್ರಯತ್ನಿಸದಂತೆ ಆಣೆ ಮಾಡಿಸಿದೆ.

ಇಷ್ಟೆಲ್ಲಾ ನಡೆಯುವ ವೇಳೆಗೆ ನಾನು ನನ್ನ ಚಲನಚಿತ್ರದ ಕೆಲಸದ ಮೆಲೆ ಬೆಂಗಳೂರಿಗೆ ಬಂದಿದ್ದೆ(ನಾನೊಬ್ಬ ಚಲನಚಿತ್ರ ಸಹನಿರ್ದೇಶಕನಾಗಿ ಆಗ ಕೆಲಸ ಮಾಡುತ್ತಿದ್ದೆ) ಈ ಸಮಯದಲ್ಲಿ ಸುಮಾಳ ಅಣ್ಣ ಸುಧೀರ್ ನಮ್ಮ ಮನೆಗೆ ಫೋನ್ ಮಾಡಿ ನನ್ನ ಅಮ್ಮನ ಹತ್ತಿರ ಮಾತನಾಡಿ ನನಗೆ ಬೈಯುತ್ತಾ.. 'ನನ್ನ ಕೈ-ಕಾಲು ಮುರಿಯುವುದಾಗಿ" ಹೇಳಿದ್ದನಂತೆ. ನನ್ನ ಅಮ್ಮನಿಗೆ ಎಲ್ಲಾ ವಿಷಯಗಳು ಗೊತ್ತಿಲ್ಲದ ಕಾರಣ ಸುಮ್ಮನಾಗಿದ್ದರು. ಅವರು ಎಷ್ಟ್ರಾದ್ರೂ ಮಲೆನಾಡಿನ ಹೆಣ್ತನ ತುಂಬಾ ಸೌಮ್ಯ ಸ್ವಭಾವ ಅಲ್ಲವೇ? ಅದೇ ಸಮಯಕ್ಕೆ ಸರಿಯಾಗಿ ನಾನು " ನವಶಕ್ತಿ ವೈಭವ" ಚಿತ್ರದ ಚಿತ್ರೀಕರಣಕ್ಕೆ ಶೃಂಗೇರಿಗೆ ಹೋಗಿದ್ದೆ. ಆ ಸಮಯದಲ್ಲಿ ಇಡೀ ಊರಿಗೆ ಊರೇ ಚಿತ್ರೀಕರಣ ನೋಡಲು ಬಂದಿತ್ತು. ಎಲ್ಲರೂ ಬಂದು ನನ್ನನ್ನು ಮಾತನಾಡಿಸಿದರು. ಆದರೆ ನನ್ನ ಕೈ-ಕಾಲು ಮುರಿಯುತ್ತೇನೆಂದು ಒಣ ಧೀಮಾಕು ತೋರಿಸಿದ ಸುಧೀರ ಆ ಮೂರೂ ದಿನ ಚಿತ್ರೀಕರಣದಲ್ಲಿ ಪತ್ತೆ ಇರಲಿಲ್ಲ.

ಇಷ್ಟೆಲ್ಲಾ ಆದ ಒಂದು ವರ್ಷದ ನಂತರ ಸುಮಾಳ ಮದುವೆ ಫಿಕ್ಸ್ ಆಯ್ತು. ನನಗೆ ವೆಡ್ಡಿಂಗ್ ಕಾರ್ಡ್ ಪೋಸ್ಟ್ ಮೂಲಕ ಕಳುಹಿಸಿದ್ದಲು. ಅದರ ಜೊತೆಗೊಂದು ಸಣ್ಣ ಪತ್ರವನ್ನು ಬರೆದು ಇಟ್ಟಿದ್ದಳು.." ನಡೆದದ್ದೆಲ್ಲಾ ಮರೆತು ಬಿಡು ನೀನು ಮದುವೆಗೆ ಬರಲೇಬೇಕು" ಎಂಬ ಒತ್ತಾಯವೂ ಇಟ್ಟಿದ್ದಳು. ಆದ ಕಾರಣ ನಾನು ಮದುವೆಗೆ ಹೋದೆ. 'ಶೃಂಗೇರಿಯ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ' ಅವಳ ಮದುವೆ. ಅಂದು ನಾನು ಹೋದ ತಕ್ಷಣ ಸುಧೀರ್ ಬಂದು ನನ್ನ ತಬ್ಬಿಕೊಂಡು "ಸಾರಿ ರೀ.. ಬಂದ್ರಲ್ಲಾ.. ತುಂಬಾ ಸಂತೋಷ" ಅಂದ. ನಂತರ ತನ್ನ ಗಂಡನ ಜೊತೆ ನಿಂತಿದ್ದ ಸುಮ ನನ್ನ ನೋಡಿದಾಕ್ಷಣ ದೂರದಿಂದಲೇ 'ಹಾಯ್' ಎನ್ನುವಂತೆ ಕೈ ಸನ್ನೆ ಮಾಡಿದಳು. ನಂತರ ಮಂಟಪ ಬಳಿ ಹೋಗಿ ಸುಮ ದಂಪತಿಗಳಿಗೆ ಶುಭ ಹಾರೈಸಿ ಹಿಂತಿರುಗಿದೆ.

ಇದಾದ 4 ವರ್ಷಗಳ ನಂತರ ಮೊನ್ನೆ 'ಬೆಂಗಳೂರಿನ ಫೋರಂ ಮಾಲ್ 'ನಲ್ಲಿ ಸಿಕ್ಕಿದ್ದಳು ಸುಮ. ಆಗ ಅವಳ ಗಂಡನ ಕೈಯಲ್ಲೊಂದು ಗಂಡು ಮಗು ಇತ್ತು. ಆಗ ತನ್ನ ಗಂಡ-ಪಾಪುವನ್ನು ನನಗೆ ಪರಿಚಯಿಸಿದಳು. ಈಗ ಅವಳ ಜೀವನ ಚೆನ್ನಾಗಿದೆ.. ಮುಂದೆಯೂ ಚೆನ್ನಾಗಿರಲಿ

-ಇಂತಿ ನೆನಪುಗಳ ದಾರದಲ್ಲಿ ಜಾರದಂತೆ ಹೂ ಮಾಲೆಯನು ಕಟ್ಟಿರುವ
-ಕವೀಶ್ ಶೃಂಗೇರಿ 9945342433

ಭಾವಾಂತರಂಗ-೩

"... ಪ್ರೀತಿಯೇ ನೀನೆಷ್ಟು ದೂರವೇ....!"

ಗೆಳೆಯನ ಮದುವೆಗೆಂದು ಆಗುಂಬೆಗೆ ಹೋಗಿದ್ದೆ.. .. ನಮ್ಮ ಮಲೆನಾಡಿನ ಪ್ರಕೃತಿಯ ಸೌಂದರ್ಯ ನನ್ನನ್ನು ಬಂಧಿಸಿತ್ತು... "ಆ ಹಸಿರೆಲೆಗಳ ನರ್ತನ.. . ಬೀಸುವ ತಣ್ಣನೆಯ ಗಾಳಿ ನನ್ನೆದೆಗೆ ತಾಕಿ 'ಹಾಯ್' ಎಂದಂತೆ ಅನಿಸುತ್ತಿತ್ತು. ಕಳೆದ ಒಂದು ತಿಂಗಳಿಂದ ಸತತವಾಗಿ ನಿದ್ರೆ ಗೆಟ್ಟಿದ್ದೆ ( ನನ್ನ ಚಿತ್ರ "ನಂ ಪ್ರೀತಿ" ಯ ಎಡಿಟಿಂಗ್ ಗಾಗಿ) ನಿದ್ರೆಯನ್ನು ಮರೆತ ನನಗೆ ಇದು ಹಗಲೋ? -ಇರುಳೋ? ಎಂದು ಗೋಚರವಾಗದ ಸ್ಥಿತಿಯಲ್ಲಿ ನಾನಿದ್ದೆ ಆಗ. ಈ ಮದುವೆ ಸಮಾರಂಭದಲ್ಲಿ ನಾನು ಕುಳಿತಲ್ಲಿಯೇ ನಿದ್ರೆ ಹೋಗುತ್ತಿದ್ದೆ, ನನ್ನ ಗೆಳೆಯರು ನನ್ನನ್ನು ಹೊಡೆದು ಎಬ್ಬಿಸುತ್ತಿದ್ದರು. ಅವರಿಗೆ ನನ್ನ ನಿದ್ರೆ ತಮಾಷೆಯಾಗಿತ್ತು. ಆದ್ರೆ ನನಗೆ ಪ್ರಾಣ ಸಂಕಟ.

"ಕವಿ... ಅಲ್ಲಿ ನೋಡು......!" ಎಂದು ನನ್ನ ಗೆಳೆಯ ಸುಬ್ಬು ನನ್ನನ್ನು ಎಚ್ಚರಿಸಿದ. ನಾನು "ಎಲ್ಲಿ...?" ಎಂದು ಅವನ ಕಣ್ಣುಗಳು ತೋರಿಸಿದ ದಿಕ್ಕನ್ನು ಹಿಂಬಾಲಿಸಿದೆ.. .ಶುರುವಾಯಿತು ನೋಡಿ " ...ಅಲ್ಲೇ ಆರಂಭ...!" ಹೆಸರು ಏನು ಅಂತ ಗೊತ್ತಿಲ್ಲ. ಬಿಳಿ ಬಣ್ಣ... ಅವಳ ಕಣ್ಣುಗಳ ನೋಡ್ತಿದ್ರೆ ಯಾವ್ದೋ ಒಂದು ಮಧುರವಾದ ಭಾವನೆ ಓಡಿಬಂದು ಈ ಹೃದಯಾನ ತಬ್ಬಿಕೊಂಡಹಾಗೆ ಅನುಭವ ಆಗ್ತಿತ್ತು. ಅವಳು ನಡಿತಾ ಇದ್ರೆ ಹ್ಞೂ... ಆ ಹಂಸಾನೆ ನಾಚಿದಂತಿತ್ತು. ಒಟ್ಟಾರೆಯಾಗಿ ಅವಳ ಸೌಂದರ್ಯಕ್ಕೆ ಭೂಮಿಯೇ ನಾಚಿತ್ತು. ಚೈತ್ರ ಕೈ ಚಾಚಿ ದೃಷ್ಟೀನಾ ತೆಗೆಯುವಂತಿತ್ತು...." ಅವಳನ್ನ ಹಾಡಿ ಹೊಗಳೋಕೆ ನಾನು 'ಕವಿ'ಯಲ್ಲ ಆದ್ರೋ ನನ್ಹೆಸ್ರು ಕವಿ. ..'ಒಟ್ಟಾರೆಯಾಗಿ ಆ ಹುಡುಗಿ ಈ 'ಕವಿ'ಯ ಜೋಡಿಗೆ ಹೇಳಿ ಮಾಡಿಸಿದಂತಿತ್ತ್ತು...! ಅಯ್ಯೋ ಈ ಮಾತನ್ನು ಹೇಳಿದ್ದು ನಾನಲ್ಲ.. ನನ್ನ ಗೆಳೆಯ ಸುಬ್ಬು....

ನನ್ನ ಗೆಳೆಯ ಮತ್ತು ಅವನ ಮಡದಿಗೆ ಮ್ಯಾರೇಜ್ ಗಿಫ್ಟ್ ಕೊಡಲು ಹಾಗೆಯೇ ಶುಭಹಾರೈಸಲು ಮದುವೆ ಮಂಟಪದ ಬಳಿ ಹೋಗಿ ಅವರಿಗೆ ಗಿಫ್ಟ್ ಕೊಟ್ಟು ವಿಷ್ ಮಾಡಿ ಹಿಂತಿರುಗುವಾಗ ಆ ಹುಡುಗಿ ಅಲ್ಲೇ ನಿಂತಿದ್ದಳು. ಆಗ ನನ್ನ ಗೆಳೆಯನನ್ನು " ಆ ಹುಡ್ಗಿಯಾರು..?" ಅಂತ ಕೇಳಿದೆ ಅದಕ್ಕೆ ಅವನು " ನನ್ನ ಚಿಕ್ಕಪ್ಪನ ಮಗಳು.. ... ಯಾಕೆ?" ಅಂದ ಅದಕ್ಕೆ ನಾನು " ಸುಮ್ನೆ ಯಾರೋ ಕೇಳಿದ್ರು..." ಅಂದೆ.

ಮದುವೆ ಏನೋ ಮುಗಿತು ಹುಡುಗನ (ನನ್ನ ಗೆಳೆಯನ ಮನೆಗೆ) ಸಂಬಂಧದ ಊಟ ಇತ್ತು. (ನೆಂಟರ ಊಟ ಅಂತಾನೂ ಕರಿತಾರೆ) ಅದಕ್ಕೆ ಮತ್ತೆ ಆ ಹುಡುಗಿ ಬಂದಿದ್ದಳು. ನನ್ನ ಮತ್ತೊಬ್ಬ ಗೆಳೆಯ ನನ್ನ ಗಮನಕ್ಕೆ ನಿನ್ನೆ ನಡೆದ ವಿಷಯವನ್ನು ನೆನಪಿಸುವುದರ ಜೊತೆಗೆ " ಈಗಲೂ ನಿನ್ನನ್ನು ನೋಡ್ತಿದ್ದಾಳೆ ಗುರೂ.." ಅಂದೇ ಬಿಟ್ಟೆ ತಥ್ ತೇರಿಕಿ..ಇದೊಳ್ಳೆ ಕಥೆ ಆಯ್ತಲ್ಲ.

ಅಂದು ಮಧ್ಯಾಹ್ನ ಊಟ ಮುಗಿದ ನಂತರ ಹೆಣ್ಣಿನ ಕಡೆಯವರಿಗೆ ಸರಿಯಾಗಿ ವಾಪಾಸ್ ಹೋಗುವ ದಾರಿ ಗೊತ್ತಿಲ್ಲದ ಕಾರಣ ನನಗೆ ಅವರನ್ನು ಸ್ವಲ್ಪ ದೂರದವರೆಗೆ ಆ ಮಲೆನಾಡಿನ ಕಾಡು ರಸ್ತೆಯಲ್ಲಿ ತೋರಿಸುವಂತೆ ನನ್ನ ಗೆಳೆಯ ಒತ್ತಾಯಿಸಿದ. ಅವನ ಮಾತಿನಂತೆ ನಾನು ಅವನ ಮೋಟಾರ್ ಬೈಕ್ ನಿಂದ ದಾರಿ ತೋರಿಸಲು ಮುಂದಾದ. ನನ್ನ ಹಿಂದೆ ಆ ಹುಡುಗಿ ಕುಳಿತಿದ್ದ ಟ್ರಾಕ್ಸ್ ಬರುತ್ತಿತ್ತು. ಆಗ ಆ ಹುಡುಗಿ ನನ್ನ ನೋಡುತ್ತ ತನ್ನ ಗೆಳೆತಿಯ ಬಳಿ "ಅವ್ನಿಗೆ ತುಂಬಾ ಜಂಭ ಕಣೆ..." ಅಂತ ಹೇಳಿದ್ದಳಂತೆ....!

ಮರುದಿನ ನನ್ನ ಗೆಳೆಯನ ಹೆಂಡತಿ ಮನೆಯಲ್ಲಿ 'ಸಂಬಂಧದ ಉಟ' ಇತ್ತು. ಅಲ್ಲಿಗೆ ನನ್ನ ಗೆಳೆಯನ ಒತ್ತಾಯದ ಮೇರೆಗೆ ನಾನೂ ಗೆಳೆಯರ ಜೊತೆ ಹೋಡೆ. ಅಲ್ಲೂ ಅವಳ ಬೆಂಬಿಡದ ನೋಟದಿಂದ ನಾನು ದಿಗ್ಭ್ರಾಂತನಾದೆ. ನನಗೆ ಅವಳು ನನ್ನನ್ನು ನೋಡುತ್ತಿದ್ದ ವಿಷಯ ಗೊತ್ತಿರಲಿಲ್ಲ. ನನ್ನ ಗೆಳೆಯ ನನಗೆ 'ಅಲ್ನೋಡು ಮೊನ್ನೆಯಿಂದ ನಿನ್ನ ಒಂದೇ ಸಮನೆ ನೋಡ್ತಿದ್ದಾಳೆ... ಮಗಾ.. ನೀನೇನೋ ಗಿಮಿಕ್ಸ್ ಮಾಡಿದ್ಯಾ.. " ಅಂಥ ಮತ್ತೆ ನನ್ನ ಛೇಡಿಸೋಕೆ ಶುರು ಮಾಡಿದ್ರು ನನ್ನ ಗೆಳೆಯರು, ಇಷ್ಟೆಲ್ಲಾ ಆಯ್ತು ಊಟಾನೂ ಆಯ್ತು. ಸರಿ ನಾನು ಮತ್ತೆ ಹಿಂತಿರುಗುವ ಸಮಯ ಬಂದೇ ಬಿಟ್ಟಿತು. ನಾನು ವಾಪಾಸ್ ಹೊರಡುವಾಗ ಆ ಹುಡುಗಿಯ ಗೆಳತಿ ನನ್ನ ಕರೆದರು. ಅವಳ ಗೆಳತಿ ಅಂದ್ರೆ ನನ್ನನ್ನು ಕಣ್ನಲ್ಲೇ ನುಂಗಿದ್ದ ಆ ಮಧುಬಾಲಿಕೆಯನ್ನು ಪರಿಚಯಿಸಿದರು. She is my close friend 'ಕಾವ್ಯಶ್ರೀ'.. ಎಂದು ಪರಿಚಯಿಸಿದರು. ನಾನು ಮುಜುಗರದಿಂದಲೇ 'ಹಾಯ್ ಮೇಡಂ' ಎಂದೆ. ..ಜೊತೆಗೆ ನನ್ನ ಎರಡೂ ಕೈ ನನ್ನೆದೆ ಮುಂದೆ ನಮಸ್ಕರಿಸ್ಸುವ ರೀತಿಯಲ್ಲಿ ನಿರತವಾಗಿದ್ದವು. ಬುದ್ಧಿ ಆ ಕ್ಷಣ ಏನೇನೋ ಯೋಚಿಸಿತು. ಮನಸ್ಸು ನಾಚಿ ನೀರಾಗಿತ್ತು. ಕಣ್ಣುಗಳಲ್ಲಿ ' ಒಮ್ಮೆ ನೋಡಬೇಕು.. ಮತ್ತೆ ನೋಡಬೇಕು... ಮತ್ತೆ ಮತ್ತೆ ಪ್ರೇಯಸೀಸಾ ಮಾತಾಡಿಸ್ಬೇಕು ಅನ್ನೋದು ಚೊಚ್ಚಲ ಪ್ರೇಮಿಯ ಬಯಕೆ ಅಂತ ಗೋಚರಿಸುತ್ತಿತ್ತು... .! " ಈ 25 ವರ್ಷದಲ್ಲಿ ಆ ಕ್ಷಣವನ್ನು ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ಅನುಭವಿಸಿದ್ದೆ... ! ಅದೇ ರೀ.. ಚೊಚ್ಚಲ ಪ್ರೇಮಿಯ ಬೆಚ್ಚನೆಯ ಬಯಕೆ. .. ! ಹ್ಞೂ.... ಅನುಪಮ.. .!

ನಾನು ಮದುವೆ ಹೆಣ್ಣಿನ ಮನೆಯಿಂದ ಹೊರಡುವ ಆ ಸಮಯದಲ್ಲಿ ಆ ಹುಡುಗಿ ನನ್ನ ಬೆನ್ನ ಹಿಂದೆ ಬರುತ್ತಿದ್ದದ್ದು ನನ್ನ ಗಮನಕ್ಕೂ ಬಮ್ದಿತು. ಆಗ ನಾನು ಗುನುಗಿದ ಹಾಡು ಹೀಗಿತ್ತು. " ಬಿಡು ಬಿಡು ಕದ್ದು ಕದ್ದು ನೋಡೋದನ್ನ" ಅಷ್ಟೆ..! ಅಲ್ಲಿಂದ ಬೈಕ್ ನಲ್ಲಿ ಬರುವಾಗ ಸುಮಾರು 60 ಕಿ.ಮೀ ದೂರದ ವ್ಯಾಪ್ತಿಯಲ್ಲಿ ನಾನು ಗಾಡಿ ಓಡಿಸುವಾಗ ಆ ಒಂದು ಗಂಟೆ ಕಾಲಾವಾಧಿಯಲ್ಲಿ ನಾನೊಂದು ಹಾಡನ್ನೇ ಬರೆದಿದ್ದೆ.. ಅದು " ಬೆಳದಿಂಗಳಾ.. ತುಂತುರು ಸೋನೆಯಲಿ... ಕಣ್ಣನು ಮುಚ್ಚಿ.. ಮನಸನ್ನು ಬಿಚ್ಚಿ I Love You ಅಂತ ಹೇಳಲಾ... ! ಈ ಮುಂಜಾನೆಯಲ್ಲಿ ಹೂ ಅರಳೋ ಕಂಪಿನಲ್ಲಿ ಹೃದಯವನ್ನೇ ನಿನಗಎ ಧಾರೆ ಎರೆಯಲಾ...! ಹೊನ್ನಿನ ಕಿರಣಗಳು ಜಾರುತಿರಲು ಧರೆಗೆ ನೀ ನನ್ನೊಳು ಅಂತ ಕೂಗಿ ಹೇಳಲಾ...! ಹೀಗೆಂದು ಅಂದು ಬರೆದಿದ್ದೆ. ನಂತರ ನಾನು ಬೆಂಗಳೂರಿಗೆ ಬಂದ ನಂತರ ಆ ಹಾಡಿನ ಸಿಡಿಯನ್ನು ಕಾವ್ಯಶ್ರೀಗೂ ಒಂದು ಕಾಪಿ ಕಳಿಸಿಕೊಟ್ಟೆ. ಅದಕ್ಕೆ ಕಾವ್ಯಶ್ರೀಯಿಂದ ಬಂದ ಉತ್ತರ " ನನಗೆ ಆ ಹಾಡು ತುಂಬಾ ಇಷ್ಟರೀ.." So, ಭಾವನೆಗಳಿಗೂ ಜೀವ ಇದೆ ಅಂತ ಅರ್ಥ ತಾನೆ..?

ಇಷ್ಟೆಲ್ಲಾ ಆದ ಕೆಲವು ದಿನಗಳ ನಂತರ ನನಗೆ ಮತ್ತೆ 'ಕಾವ್ಯಶ್ರೀ' ಯಿಂದ ಒಂದು ಫೋನ್ ಕರೆ ಬಂತು. "ನಮಸ್ಕಾರ ಹೇಗಿದ್ದೀರಾ...?" ಅಂತ ಕೇಳಿದ್ರು....ನಾನು.."ಇಲ್ಲಾ ನೋಡೋಕೆ ನಾನು ಚೆನ್ನಾಗಿಲ್ಲ..ಹೆಲ್ತಿಯಾಗಿದ್ದೇನೆ" ಅಂದೆ. ಅದಕ್ಕೆ ಕಾವ್ಯಶ್ರೀ ಹೇಳಿದ್ದು ಹೀಗೆ "ರೀ.. ಅಷ್ಟೊಂದು ಚೆನ್ನಾಗಿದ್ದೀರಾ..ಯಾಕೆ ಹೀಗಂತೀರಾ..?" ಅಂದರು. ನಾನು "ಸತ್ಯರೀ..ನಾನು ನೋಡೋಕೆ ಚೆನ್ನಾಗಿಲ್ಲ..ಆದ್ರೆ ಆರೋಗ್ಯವಾಗಿದ್ದೇನೆ" ಅಂದೆ ಹಾಗೆ ಅವರ ಮಾತುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದೆ. ಅವರ ಮಾತಲ್ಲಿ ಎಲ್ಲೋ ಒಂದು ಕಡೆ 'ಅವರಿಗೆ ನನಗೆ ಹೇಳಬೇಕೆನಿಸಿ.. ಹೇಳದೆಯೇ ಮುಚ್ಚಿಟ್ಟ ವಿಷಯವೊಂದಿದೆ ಅಂತ ಅನಿಸುತ್ತಿತ್ತು".

"ಸೋ..ಕಾವ್ಯಶ್ರೀಯವರೇ..ಒಂದರೂ ಸತ್ಯರೀ...ನಿಮ್ಮನ್ನು ನೋಡಿದಾಗ...ಅಥವಾ ನಿಮ್ಮ ಬಗ್ಗೆ ಏನಾದ್ರೂ ಯೋಚಿಸುವಾಗ ನನಗೆ ಹೀಗೆ ಅನಿಸಿದ್ದಿದೆ..ರೀ...." ನನ್ ದೇಹದಲ್ಲಿ ಒಂದು ಗಾಯ ಆಗಿ.. ಆ ಗಾಯ.. ತುಂಬಾ ತುರುಕೆಯಾಗಿ, ಆ ಗಾಯನ ಕೈ ಬೆರಳಿನಿಂದ ಕೆರೆಯುವಾಗ ಏನೋ ಒಂಥರಾ ಸುಖ.. ಬಟ್ ಆ ಗಾಯ ಮತ್ತು ಸುಖ ಎರಡೂ ಇಲ್ಲಿ ಪ್ರೇಮ ನಿವೇದನೆ.." ಕಾವ್ಯಶ್ರೀಯವರೇ ಇಂದಿಗೂ ನಿಮ್ಮ ಹೆಸರನ್ನು ಹೇಳುತ್ತಾ ನನ್ನ ಗೆಳೆಯರು ನನ್ನನ್ನು ತುಂಬಾ ಛೇಡಿಸುತ್ತಿದ್ದಾರೆ. ಪ್ಲೀಸ್ ಅವರಿಗೆ ನೀವೇ ಏನಾದ್ರೂ ಹೇಳಿ..ಸತ್ಯ ಹೇಳ್ತಿರೋ ಅಥವಾ ಸುಳ್ಳು ಹೇಳ್ತಿರೋ ಗೊತ್ತಿಲ್ಲ... ನನ್ನಿಂದ ಅಂತೂ ನನ್ನ ಗೆಳೆಯರ ತಮಾಷೆಗೆ ಫುಲ್ ಸ್ಟಾಪ್ ಇಡಲು ಅಸಾಧ್ಯ..

ಇಂತಿ- ಭಾವನೆಯ ಬಲೆಯೊಳಗೆ ಸಿಕ್ಕಿ ವಿಲಿವಿಲಿ ಒದ್ದಾಡೋ ಮೀನು...
-ಕವೀಶ್ ಶೃಂಗೇರಿ. ಫೋ: 99453 42433

ಭಾವಾಂತರಂಗ-೨

ಇದಕ್ಕೊಂದು ಹೆಸರಿಡೆ.......

ಪ್ರತಿದಿನ ಬೆಳಗಾದ್ರೆ ಸಾಕು. . . "ಇಬ್ಬನಿಯ ಧರೆಗೆ ಜಾರುತಿದೆ. .. . ಮೊಗ್ಗು ಹೂವಾಗುತ್ತಿದೆ. . . . , ಆ ಹೂವ ಎದೆಯನ್ನು ದುಂಬಿ ಚುಂಬಿಸುತ್ತಿದೆ. . ..ಸೂರ್ಯನ ಕಿರಣಗಳಿಗೆ ಭೂಮಿತಾಯಿ ಸ್ವಾಗತ ಕೋರುತ್ತಿದೆ. ದೂರದೂರಿನಿಂದ ಹತ್ತಿರದವರಿಗೆ ನಿಮ್ಮ ಕಮೀಶನ ಸಂದೇಶವು ಹೇಳುತ್ತಿದೆ 'ಶುಭೋದಯ'. . ಎಂದು 'ತಾನ್ಯ' ಅವರಿಗೆ ನನ್ನ ಮೊಬೈಲ್ ನಿಂದ ಒಂದು ಸಂದೇಶ ರವಾನಿಸುತ್ತೇನೆ. . . .ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. "ತಾನ್ಯ ಅವರನ್ನು ನೆನಪಿಸಿಕೊಂಡಾಗಲೆಲ್ಲಾ. .. ಅಥವಾ ನಾನೇ ಅವರಿಗೊಂದು ಫೋನ್ ಮಾಡಬೇಕೆಂದುಕೊಂಡಾಗಲೆಲ್ಲಾ.. ತಾನ್ಯ ಅವರಿಂದಲೇ ಒಂದು ಮೆಸೇಜ್ ನನ್ನ ಮೊಬೈಲ್ ಗೆ ಬಂದದ್ದಿದೆ. ಕೆಲವೊಮ್ಮೆ ಅವರೇ ಫೋನ್ ಮಾಡಿದ್ದಿದೆ.. . ಇನ್ನು ಕೆಲವೊಮ್ಮೆ ಅವರೇ ಎದುರಿಗೆ ಸಿಕ್ಕಿ. . ."ನಮಸ್ಕಾರ. .. .ಹೇಗಿದ್ದೀರಾ. . ? ಅಂತ ಕೇಳಿದ್ದಿದೆ." ಅವರಿಗೆ ಈ ರೀತಿ ಆದ ವಿಷಯ ಹೇಳಿದ್ದೆ. ಆಗ ಅವರು ನೂರು ವರ್ಷ ಬೇಡಪ್ಪಾ ಎಷ್ಟಿದಿಯೋ ಅಷ್ಟೇ ಸಾಕು ಅಂದಿದ್ದರು. . .ಜೊತೆಗೊಂದು ಮುಗ್ಧ ನಗುವನ್ನು ಸೂಸಿದ್ದರು. ನನಗೆ ಹೆಚ್ಚು ಬರೆಯುವ ಹವ್ಯಾಸ ಇದ್ದಿದ್ದರಿಂದ ನಾನೇನಾದ್ರೂ ಬರೆದ್ರೆ ಹೇಗಿದೆ? ಎಂದು ಹೊತ್ತಲ್ಲದ ಹೊತ್ತಿನಲ್ಲಿ ಸಂದೇಶ ಕಳುಹಿಸುತ್ತೇನೆ. ಆಗ ಅವರು ಅದಕ್ಕೆ ವಿಶ್ಲೇಷಣೆ ನೀಡುತ್ತಿದ್ದರು. ಹಾಗೆ ಸರಿಯಾದ ಸಲಹೆ ನೀಡುತ್ತಿದ್ದರು. ನಂತರ ನಾನು "ಸಾರಿ ಮೇಡಂ" ಅಂತ ಸಂದೇಶ ಕಳುಹಿಸುತ್ತಿದ್ದೆ. ಆಗ ಅವರು ಸಾರಿ ಯಾಕೆ. .. .? ಎಂದು ಮತ್ತೆ ಹಿಂತಿರುಗಿ ಸಂದೇಶ ಕಳುಹಿಸುತ್ತಿದ್ದರು. ಅದಕ್ಕೆ ನಾನು 'ಇಷ್ಟೊತ್ತಿನಲ್ಲಿ ನಿಮ್ಗೆ ಮೆಸೆಜ್ ಮಾಡಿ ತೊಂದ್ರೆ ಕೊಟ್ಟಿದ್ದಕ್ಕೆ (ರಾತ್ರಿ 12.30) ಅಂತ ಹಿಂತಿರುಗಿ ಸಂದೇಶ ಕಳುಹಿಸುತ್ತಿದ್ದೆ. ಅದಕ್ಕೆ ಅವರು "ಪರವಾಗಿಲ್ಲ ಬಿಡಿ. . .. .ಈ ಸಾರಿ ಫಾರ್ಮಲಿಟೀಸ್ ಬೇಡ. .. ... " ಅಂತ ಮತ್ತೆ ಹಿಂತುರಿಗಿ ಸಂದೇಶ ಕಳುಹಿಸುತ್ತಿದ್ದರು.

ತಾನ್ಯ ಅವರು ಎಲ್ಲಾದ್ರೂ ಹೊರಗೆ ಸಿಟಿಗೆ ಹೋಗುವಾಗ ನನಗೆ ತಿಳಿಸುತ್ತಿದ್ದರು. (ಮೊಬೈಲ್ ಸಂದೇಶದ ಮೂಲಕ) ಅದಕ್ಕೆ ನಾನು ಎಲ್ಲ ಮಕ್ಕಳ ಮೇಲಿರುವ ಗೌರವದಂತೆ ಇವರಿಗೂ. . ... ಹುಷಾರಾಗಿ ಹೋಗಿ ಬನ್ನಿ ಅಂತ ನನ್ನ ಸಂದೇಶ ರವಾನಿಸುತ್ತಿದ್ದೆ. ಕೊನೆಗೆ ಅವರು ಮನೆಗೆ (ರೂಂ) ಸೇರಿದ ನಂತರ ಮತ್ತೆ ನನಗೆ ಸಂದೇಶ ಕಳಿಸಿ ರೂಂ ತಲುಪಿದ ವಿಷಯ ತಿಳಿಸುತ್ತಿದ್ದರು. "ಈಗಷ್ಟೆ ಮನೆಗೆ ಬಂದೆ ಊಟನೂ ಆಯ್ತು ಮಲಗ್ತಾ ಇದ್ದಿನಿ. . .ನೀವೂ ಊಟಮಾಡಿ ಮಲಗಿ ಶುಭರಾತ್ರಿ. ." ಈ ಸಂದೇಶದೊಂದಿಗೆ ಅಂದಿನ ದಿನ ಕೊನೆಗೊಳ್ಳುತ್ತಿತ್ತು.

ಒಂದು ದಿನ ನಾನು " ನನ್ನ ಕೆಲಸವನ್ನು ಬಿಟ್ಟು ಬೇರೆ ಕೆಲಸದ ಮೇಲೆ ಊರಿಗೆ ಹೋಗ್ತೀನಿ ಇನ್ನು ಮುಂದೆ ನಿಮಗೆ ಸಿಗೋದಿಲ್ಲ.. " ಅಂತ ಹೇಳಿ ನನ್ನ ಊರಿಗೆ ಹೋಗಿದ್ದೆ. ನಾನು ಮತ್ತೆ ಬೆಂಗಳೂರಿಗೆ ಹಿಂತಿರುಗಿ ಬರುವ ಯೋಚನೆಯೂ ಇರಲಿಲ್ಲ. ಆದರೆ ಮತ್ತೆ ನನ್ನನ್ನು ಒಂದು ವಾರದ ನಂತರ ನಮ್ಮ ಬಾಸ್ ವಾಪಾಸ್ ಕರೆಸಿಕೊಂಡರು. ಇಲ್ಲಿಯೇ ಕೆಲಸ ಮಾಡುವಂತೆ ಒತ್ತಾಯಿಸಿದರು. ನಾನು ಮತ್ತೆ ವಾಪಾಸ್ಸು ಬಂದ ವಿಷಯ ತಿಳಿದ ತಾನ್ಯ ಮೇಡಂ ಅವರು " ಸದ್ಯ ವಾಪಾಸ್ ಬಂದ್ರಲ್ಲಾ ಅಷ್ಟೇ ಸಾಕು. .." ಎಂದು ನನ್ನ ಮೊಬೈಲ್ ಗೆ ಮೇಸೆಜ್ ಮಾಡಿದರು. ಅದಕ್ಕೆ ನಾನು ಅವರಿಗೆ ಒಂದು ವಿಷಯ ಹೇಳಿದೆ. " ನಾನು ಊರಿಂದ ಬೆಂಗಳೂರಿಗೆ ಬರುವಾಗ ಬಸ್ ಸ್ಟ್ಯಾಂಡಿಗೆ ಬಂದು ಮತ್ತೆ ಅಮ್ಮನ ಮೇಲೆ ನೆನಪಾಗಿ ವಾಪಾಸ್ ಮನೆಗೆ ಹೋದೆ. . ಮನೆಯಲ್ಲಿ ಯಾಕೆ ವಾಪಾಸ್ ಬಂದೆ? ಅಂತ ಕೇಳಿದ್ರು ನಾನು 'ಬಸ್ ತಪ್ಪೋಯ್ತು' ಅಂತ ಸುಳ್ಲು ಹೇಳಿದ್ದೆ.. ."ಹೀಗಂತ ನನ್ನ ಮೊಬೈಲ್ ನಿಂದ ಒಂದು ಸಂದೇಶ ಕಳುಹಿಸಿದೆ. ಅದಕ್ಕೆ ಅವರು. .. ಕಳುಹಿಸಿದ ಸಂದೇಶ ಹೀಗಿತ್ತು. "ಓಹ್ .. ! ಹಾಗಾದ್ರೆ ಇಲ್ಲೂ ನಿಮಗೆ ಯಾರನ್ನೋ ನೋಡಬೇಕು ಅನಿಸಿರಬೇಕು. ಅದಕ್ಕೆ ವಾಪಾಸ್ ಬಂದಿದ್ದಾ.. . ? ಅದು ಯಾರು. . .? ಹೇಳಿ ಪ್ಲೀಸ್" ಅಂತ ಹಟ ಹಿಡಿದಿದ್ದರು. .ನಾನು ಬೇರೆ ಏನಾದ್ರೂ ಮಾತಾಡೋಣಾ. . ? ಅಂತ ಹೇಳಿ ಅವರ ಕುತೂಹಲಕ್ಕೆ ಪೂರ್ಣ ವಿರಾಮ ಹಾಕಿದೆ. ಇಷ್ಟೆಲ್ಲಾ ಆಗಿದ್ದು ನಿಜ.. .ತಾನ್ಯ ಅವರ ಬಗ್ಗೆ ನನ್ಗೆ ತುಂಬಾ ಗೌರವವಿದೆ. ಅವರಿಗೆ ನನ್ನ ಬಗ್ಗೆ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ..ಇದು ಸ್ನೇಹನಾ.. ..? ಪ್ರೀತಿನಾ. .?ಗೌರವಾನಾ. .. . ?ಮತ್ತೆನ್ನೇನು. . .? ಪ್ರಿಯ ಓದುದರೇ. .. ಈ ಭಾವನೆ ಯಾವುದು? ದಯವಿಟ್ಟು ಇದಕ್ಕೊಂದು ಹೆಸರಿಡಿ ಪ್ಲೀಸ್

-ಇಂತಿ ಹುಚ್ಚು ಭಾವನೆಗಳ ಸರದಾರ- ಕವೀಶ್ ಶೃಂಗೇರಿ ಮೊ:9945342433

ಭಾವಾಂತರಂಗ- ೧

ಹೊತ್ತು ಮುಳುಗುವ ಮುನ್ನ ನನ್ನೆದೆಯಲ್ಲಿ........

ಇಂದಿಗೂ ಪ್ರತಿದಿನ ಸಂಜೆ 5 ಗಂಟೆ ಆಯ್ತೆಂದರೆ. .. ನನ್ನೆದೆಯಲ್ಲಿ ಒಂಥರಾ ಕೋಲಾಹಲ .. . .! ನನ್ನೆದೆ ಒಳಗಡೆ ಯಾರೋ ಬಂದ ಹಾಗೆ... .! ಬೆನ್ನ ಹಿಂದಿನಿಂದ . ... "ಯಾಕಿಷ್ಟು ಲೇಟು. .. . ? ನಿನ್ಗೆ ಕೇಳಿದ್ದು. . ನಾನಂದ್ರೆ ನಿನ್ಗೆ ಅಷ್ಟೊಂದು ಇಷ್ಟನಾ?" ಅಂತ ಹೇಳಿ ತುಸು ನಾಚಿ ಕೆನ್ನೆ ನಾಚಿ ನಗುತ್ತಾ. . .ತಲೆ ತಗ್ಗಿಸಿದಂತೆ. .. ಯಾವಾಗಲೂ ನನ್ನ ಸ್ಮೃತಿಪಟಲದಲ್ಲಿ ತಕಧಿಮಿ ಹಾಡಿ ಕುಣಿಯುತ್ತಿದ್ದ ಹಾಗೆ ಭಾಸವಾಗುತ್ತದೆ. . !

ಈ ಎಲ್ಲಾ ನನ್ನ ಭಾವನೆಗಳಿಗೆ ಅಧಿಪತಿಯಾದಾಕೆ ಯಾರು ಗೊತ್ತಾ. .. ? ಆ ಹೆಸರನ್ನು ಹೇಳಲೂ ಆನಂದ ಬಚ್ಚಿಡಲೂ ಒಂಥರಾ ಆನಂದ. .. ! " ಪ್ರತಿದಿನ ಸೂರ್ಯ ತನ್ನ ಜಗಬೆಳಗುವ ಕೆಲಸ ಮುಗಿಸಿ ಹಿಂತಿರುಗುತ್ತಿರುವಾಗ ಆ ಸಂಜೆಯ ಕೆಂಪು ಬಣ್ಣ, ಅವಳ ಆ ಗುಳಿಬಿದ್ದ ಕೆನ್ನೆಯ ಮೇಲೆ ರಾರಾಜಿಸುತ್ತಿರುವಾಗ. .. .ಆಗ ಅವಳು ನಾಚಿ ನಗ್ತಿರೋದನ್ನು ನಾನ್ ನೋಡೋಕೆ ಓಡೋಡಿ ಬರ್ತಿದ್ರಲ್ಲಿ ಅದೇನೋ ಒಂಥರಾ ಖುಷಿ ಇತ್ತು... .!

ಆ ಖುಷಿಯೇ ಇಂದು ನೆನಪಾಗಿ ನನ್ನೆದೆಗೆ ಕಚಗುಳಿ ಇಡುತ್ತಿದೆ. ಈ ನೆನಪುಗಳೇ ಹೀಗೆ. .. "ಬೇಕು ಅಂದಾಗ ಓಡೋಡಿ ಬರ್ತಾವೆ... ಬೇಡ ಬೇಡ ಅಂದ್ರೂ ಕೆಲವೊಮ್ಮೆ ಮನಸಿಗೆ ನೋವು ಕೊಡ್ತಾವೆ... .ಹ್ಞೂ. ... ಆ ನೋವಲ್ಲೂ ಒಂಥರಾ ನಲಿವಿರುತ್ತೆ" ಈ ನೆನಪಿನ ನೌಕೆಯಲ್ಲಿ ನನ್ನ ಭಾವನೆಗಳಾ ಜೊತೆಗೆ ಬೆಸುಗೆಯಾದ ಆ ಭಾವನೆಯ ಹೆಸರೆ 'ಭಾವನಾ' ಓಹ್...! ಹೆಸರು ಹೇಳೇ ಬಿಟ್ಟೆನಲ್ಲಾ? ಈ ಹೆಸರು ನನ್ನ ನಿತ್ಯ ಜೀವನದಲ್ಲಿ ಹೇಗೆ ನನ್ನೊಂದಿಗೆ ಜೊತೆಯಾಗುತ್ತದೆ ಗೊತ್ತಾ? ಹೇಳ್ತಿನಿ ಕೇಳಿ. .. " ಬೆಳಿಗ್ಗೆ ಎದ್ದು ಎಫ್ ಎಂ ರೇಡಿಯೋ ಆನ್ ಮಾಡಿದರೆ ಅಲ್ಲಿಯೂ 'ಭಾವನಾ' ಎಂಬ ಆರ್ ಜೆ (ರೇಡಿಯೋ ನಿರೂಪಕಿ) ಮಾತನಾಡುತ್ತಾ . .. .ಶುಭೋದಯ .. .. ನಾನ್ ಭಾವನಾ ಮಾತಾಡ್ತಿದ್ದೀನಿ. .. ಅಂತ ಬೆಳಿಗ್ಗೇನೆ ನನ್ನನ್ನು ನೆನಪಿನಂಗಳಕ್ಕೆ ರಂಗೋಲಿ ಇಡೋಕೆ ಕರ್ಕೋಂಡು ಹೋಗ್ತಾಳೆ....ಸರಿ ಟೈಮ್ ಆಯ್ತು ಆಫೀಸ್ ಗೆ ಅಂತ ಹೋಗ್ತಿದ್ರೆ ಸಡನ್ನಾಗಿ ಒಂದು ಆಟೋರಿಕ್ಷಾ ಕಣ್ಮುಂದೆ ಬರೊತ್ತೆ. .... ಆ ಆಟೋದ ಹಿಂದೆ ಬರೆದಿರುತ್ತೆ ಹಾಗೆಯ ಮುಂದೆ ಹೊಗಿದ್ರೆ ಅಲ್ಲೊಂದು ಬೋರ್ಡ್ ಕಾಣುತ್ತೆ. 'ಭಾವನಾ ಸ್ಟುಡಿಯೋಸ್ ....! ಅಂತ, ಹಸಿವಾಗ್ತಿದ್ರೆ ತಿಂಡಿ ತಿನ್ನಲು ಹೋಟೆಲ್ ಗೆ ಹೋದರೂ.. . ಅಲ್ಲಿಯೂ 'ಭಾವನಾ ಹೋಟೆಲ್' ಅಂತ ಬೋರ್ಡ್ . ತಲೆ ನೋಯ್ತಿದೆ ಒಂದು ಮಾತ್ರೆ ಬೇಕು ಅಂತ ಮೆಡಿಕಲ್ ಗೆ ಹೋದರೂ ... .ಅಲ್ಲಿಯೂ 'ಭಾವನಾ ಮೆಡಿಕಲ್' ಅಂತ ಇರುತ್ತೆ. ಸಂಜೆ ತಲೆಕೆಟ್ಟು ಕುಡಿಯೋಕೆ ಬಾರ್ ಗೆ ಹೋದರೂ ಅಲ್ಲಿಯೂ 'ಭಾವನಾ ಬಾರ್ & ರೆಸ್ಟೋರೆಂಟ್' ಅಂತ ಇರುತ್ತೆ.. ಹ್ಞು.. ಆ ಕುಡಿದ ಅಮಲಿನಲ್ಲೂ ನನಗೆ ಹೀಗೂ ಅನಿಸಿದ್ದಿದೆ.... " ನಿಜವಾಗಿಯೂ ಭಾವನೆಗಳಿಗೂ ಜೀವ ಇದೆ ಅಂತ"

ಈಗ ಭಾವನಾ ಎಲ್ಲಿದ್ದಾಳೋ ಗೊತ್ತಿಲ್ಲ. ಹೇಗಿದ್ದಾಳೋ ಗೊತ್ತಿಲ್ಲ .ಆದ್ರೆ ಭಾವನೆ ಭಾವನಾಳ ಹೆಸರಿನಿಂದ ಪ್ರತಿ ದಿನವೂ ನನ್ನೊಂದಿಗೆ ಜೊತೆಯಾಗಿದೆ. ಸೋ ನಾನ್ ಒಂಟಿ ಅಲ್ಲ. ನನ್ನೊಂದಿಗೆ ಸವಿನೆನಪುಗಳು. . . ., ಹೊಂಗನಸುಗಳು.. ಇದಾವೆ. . ಇಷ್ಟೆ ನನ್ ಪ್ರಪಂಚ ನಾನು, ಸವಿನೆನಪುಗಳು ಮತ್ತು ನನ್ ಕನಸುಗಳು ಅಷ್ಟೆ.. .. .! ಅಷ್ಟೆ. . ..!

ಭಾವನಾ. .ಭಾವನಾ....
ನೀನೊಂದು ಹೂವು ಕಣೆ . ನನಗೆ
ನೀನಂದ್ರೆ ಪ್ರಾಣ ಕಣೆ . .ಕವಿಗೆ
ನನ್ನೆದೆಯ ಗೂಡಲ್ಲಿ ಭಾವನೆಯ ಬಿಂದು
ಭೋರ್ಗರೆವಾ ... ಸಿಹಿಯಾದ ಅಮೃತದಾ ಸಿಂಧು
ಭಾವನಾ. .. . .ಭಾವನಾ
-ಇಂತಿ ನೆನಪಿನ ನೌಕೆಯ ಪಯಣಿಗ- ಕವೀಶ್ ಶೃಂಗೇರಿ 99453 42433

Wednesday, April 8, 2009

ನಂಪ್ರೀತಿ

ನಂ ಪ್ರೀತಿ ಹಿಂದಿನದಲ್ಲ,
ನಂ ಪ್ರೀತಿ ನಾಳೆಯದಲ್ಲ
ನಿತ್ಯ ನೂತನ ಮೆಚ್ಚಿನ ಪಯಣವೇ ನಂಪ್ರೀತಿ

ನಂ ಪ್ರೀತಿಗೆ ಹುಟ್ಟೂ ಇಲ್ಲ
ನಂ ಪ್ರೀತಿಗೆ ಸಾವೂ ಇಲ್ಲ
ಬದುಕಿನ ಸವಿಕ್ಷಣಗಳ ತೋರಿಸೋ ಮಾಯಾಕನ್ನಡಿ ನಂ ಪ್ರೀತಿ

ನಂ ಪ್ರೀತಿ ಕಾಣೋದಿಲ್ಲ
ನಂ ಪ್ರೀತಿ ಕೇಳೋದಿಲ್ಲ
ಸ್ಪರ್ಶಕ್ಕೆ ಸಿಗದೇ ಬೆಚ್ಚನೆ ಅನುಭವ ನೀಡುವುದೇ ನಂ ಪ್ರೀತಿ

ನಂ ಪ್ರೀತಿ ಬರಿ ಕನಸೇ ಅಲ್ಲ
ನಂ ಪ್ರೀತಿ ನನಸೂ ಅಲ್ಲ
ವಾಸ್ತವ ಜಗತ್ತಿನ ಮರೀಚಿಕೆಯೇ ನಂ ಪ್ರೀತಿ