Saturday, May 2, 2009

ಭಾವಾಂತರಂಗ-೩

"... ಪ್ರೀತಿಯೇ ನೀನೆಷ್ಟು ದೂರವೇ....!"

ಗೆಳೆಯನ ಮದುವೆಗೆಂದು ಆಗುಂಬೆಗೆ ಹೋಗಿದ್ದೆ.. .. ನಮ್ಮ ಮಲೆನಾಡಿನ ಪ್ರಕೃತಿಯ ಸೌಂದರ್ಯ ನನ್ನನ್ನು ಬಂಧಿಸಿತ್ತು... "ಆ ಹಸಿರೆಲೆಗಳ ನರ್ತನ.. . ಬೀಸುವ ತಣ್ಣನೆಯ ಗಾಳಿ ನನ್ನೆದೆಗೆ ತಾಕಿ 'ಹಾಯ್' ಎಂದಂತೆ ಅನಿಸುತ್ತಿತ್ತು. ಕಳೆದ ಒಂದು ತಿಂಗಳಿಂದ ಸತತವಾಗಿ ನಿದ್ರೆ ಗೆಟ್ಟಿದ್ದೆ ( ನನ್ನ ಚಿತ್ರ "ನಂ ಪ್ರೀತಿ" ಯ ಎಡಿಟಿಂಗ್ ಗಾಗಿ) ನಿದ್ರೆಯನ್ನು ಮರೆತ ನನಗೆ ಇದು ಹಗಲೋ? -ಇರುಳೋ? ಎಂದು ಗೋಚರವಾಗದ ಸ್ಥಿತಿಯಲ್ಲಿ ನಾನಿದ್ದೆ ಆಗ. ಈ ಮದುವೆ ಸಮಾರಂಭದಲ್ಲಿ ನಾನು ಕುಳಿತಲ್ಲಿಯೇ ನಿದ್ರೆ ಹೋಗುತ್ತಿದ್ದೆ, ನನ್ನ ಗೆಳೆಯರು ನನ್ನನ್ನು ಹೊಡೆದು ಎಬ್ಬಿಸುತ್ತಿದ್ದರು. ಅವರಿಗೆ ನನ್ನ ನಿದ್ರೆ ತಮಾಷೆಯಾಗಿತ್ತು. ಆದ್ರೆ ನನಗೆ ಪ್ರಾಣ ಸಂಕಟ.

"ಕವಿ... ಅಲ್ಲಿ ನೋಡು......!" ಎಂದು ನನ್ನ ಗೆಳೆಯ ಸುಬ್ಬು ನನ್ನನ್ನು ಎಚ್ಚರಿಸಿದ. ನಾನು "ಎಲ್ಲಿ...?" ಎಂದು ಅವನ ಕಣ್ಣುಗಳು ತೋರಿಸಿದ ದಿಕ್ಕನ್ನು ಹಿಂಬಾಲಿಸಿದೆ.. .ಶುರುವಾಯಿತು ನೋಡಿ " ...ಅಲ್ಲೇ ಆರಂಭ...!" ಹೆಸರು ಏನು ಅಂತ ಗೊತ್ತಿಲ್ಲ. ಬಿಳಿ ಬಣ್ಣ... ಅವಳ ಕಣ್ಣುಗಳ ನೋಡ್ತಿದ್ರೆ ಯಾವ್ದೋ ಒಂದು ಮಧುರವಾದ ಭಾವನೆ ಓಡಿಬಂದು ಈ ಹೃದಯಾನ ತಬ್ಬಿಕೊಂಡಹಾಗೆ ಅನುಭವ ಆಗ್ತಿತ್ತು. ಅವಳು ನಡಿತಾ ಇದ್ರೆ ಹ್ಞೂ... ಆ ಹಂಸಾನೆ ನಾಚಿದಂತಿತ್ತು. ಒಟ್ಟಾರೆಯಾಗಿ ಅವಳ ಸೌಂದರ್ಯಕ್ಕೆ ಭೂಮಿಯೇ ನಾಚಿತ್ತು. ಚೈತ್ರ ಕೈ ಚಾಚಿ ದೃಷ್ಟೀನಾ ತೆಗೆಯುವಂತಿತ್ತು...." ಅವಳನ್ನ ಹಾಡಿ ಹೊಗಳೋಕೆ ನಾನು 'ಕವಿ'ಯಲ್ಲ ಆದ್ರೋ ನನ್ಹೆಸ್ರು ಕವಿ. ..'ಒಟ್ಟಾರೆಯಾಗಿ ಆ ಹುಡುಗಿ ಈ 'ಕವಿ'ಯ ಜೋಡಿಗೆ ಹೇಳಿ ಮಾಡಿಸಿದಂತಿತ್ತ್ತು...! ಅಯ್ಯೋ ಈ ಮಾತನ್ನು ಹೇಳಿದ್ದು ನಾನಲ್ಲ.. ನನ್ನ ಗೆಳೆಯ ಸುಬ್ಬು....

ನನ್ನ ಗೆಳೆಯ ಮತ್ತು ಅವನ ಮಡದಿಗೆ ಮ್ಯಾರೇಜ್ ಗಿಫ್ಟ್ ಕೊಡಲು ಹಾಗೆಯೇ ಶುಭಹಾರೈಸಲು ಮದುವೆ ಮಂಟಪದ ಬಳಿ ಹೋಗಿ ಅವರಿಗೆ ಗಿಫ್ಟ್ ಕೊಟ್ಟು ವಿಷ್ ಮಾಡಿ ಹಿಂತಿರುಗುವಾಗ ಆ ಹುಡುಗಿ ಅಲ್ಲೇ ನಿಂತಿದ್ದಳು. ಆಗ ನನ್ನ ಗೆಳೆಯನನ್ನು " ಆ ಹುಡ್ಗಿಯಾರು..?" ಅಂತ ಕೇಳಿದೆ ಅದಕ್ಕೆ ಅವನು " ನನ್ನ ಚಿಕ್ಕಪ್ಪನ ಮಗಳು.. ... ಯಾಕೆ?" ಅಂದ ಅದಕ್ಕೆ ನಾನು " ಸುಮ್ನೆ ಯಾರೋ ಕೇಳಿದ್ರು..." ಅಂದೆ.

ಮದುವೆ ಏನೋ ಮುಗಿತು ಹುಡುಗನ (ನನ್ನ ಗೆಳೆಯನ ಮನೆಗೆ) ಸಂಬಂಧದ ಊಟ ಇತ್ತು. (ನೆಂಟರ ಊಟ ಅಂತಾನೂ ಕರಿತಾರೆ) ಅದಕ್ಕೆ ಮತ್ತೆ ಆ ಹುಡುಗಿ ಬಂದಿದ್ದಳು. ನನ್ನ ಮತ್ತೊಬ್ಬ ಗೆಳೆಯ ನನ್ನ ಗಮನಕ್ಕೆ ನಿನ್ನೆ ನಡೆದ ವಿಷಯವನ್ನು ನೆನಪಿಸುವುದರ ಜೊತೆಗೆ " ಈಗಲೂ ನಿನ್ನನ್ನು ನೋಡ್ತಿದ್ದಾಳೆ ಗುರೂ.." ಅಂದೇ ಬಿಟ್ಟೆ ತಥ್ ತೇರಿಕಿ..ಇದೊಳ್ಳೆ ಕಥೆ ಆಯ್ತಲ್ಲ.

ಅಂದು ಮಧ್ಯಾಹ್ನ ಊಟ ಮುಗಿದ ನಂತರ ಹೆಣ್ಣಿನ ಕಡೆಯವರಿಗೆ ಸರಿಯಾಗಿ ವಾಪಾಸ್ ಹೋಗುವ ದಾರಿ ಗೊತ್ತಿಲ್ಲದ ಕಾರಣ ನನಗೆ ಅವರನ್ನು ಸ್ವಲ್ಪ ದೂರದವರೆಗೆ ಆ ಮಲೆನಾಡಿನ ಕಾಡು ರಸ್ತೆಯಲ್ಲಿ ತೋರಿಸುವಂತೆ ನನ್ನ ಗೆಳೆಯ ಒತ್ತಾಯಿಸಿದ. ಅವನ ಮಾತಿನಂತೆ ನಾನು ಅವನ ಮೋಟಾರ್ ಬೈಕ್ ನಿಂದ ದಾರಿ ತೋರಿಸಲು ಮುಂದಾದ. ನನ್ನ ಹಿಂದೆ ಆ ಹುಡುಗಿ ಕುಳಿತಿದ್ದ ಟ್ರಾಕ್ಸ್ ಬರುತ್ತಿತ್ತು. ಆಗ ಆ ಹುಡುಗಿ ನನ್ನ ನೋಡುತ್ತ ತನ್ನ ಗೆಳೆತಿಯ ಬಳಿ "ಅವ್ನಿಗೆ ತುಂಬಾ ಜಂಭ ಕಣೆ..." ಅಂತ ಹೇಳಿದ್ದಳಂತೆ....!

ಮರುದಿನ ನನ್ನ ಗೆಳೆಯನ ಹೆಂಡತಿ ಮನೆಯಲ್ಲಿ 'ಸಂಬಂಧದ ಉಟ' ಇತ್ತು. ಅಲ್ಲಿಗೆ ನನ್ನ ಗೆಳೆಯನ ಒತ್ತಾಯದ ಮೇರೆಗೆ ನಾನೂ ಗೆಳೆಯರ ಜೊತೆ ಹೋಡೆ. ಅಲ್ಲೂ ಅವಳ ಬೆಂಬಿಡದ ನೋಟದಿಂದ ನಾನು ದಿಗ್ಭ್ರಾಂತನಾದೆ. ನನಗೆ ಅವಳು ನನ್ನನ್ನು ನೋಡುತ್ತಿದ್ದ ವಿಷಯ ಗೊತ್ತಿರಲಿಲ್ಲ. ನನ್ನ ಗೆಳೆಯ ನನಗೆ 'ಅಲ್ನೋಡು ಮೊನ್ನೆಯಿಂದ ನಿನ್ನ ಒಂದೇ ಸಮನೆ ನೋಡ್ತಿದ್ದಾಳೆ... ಮಗಾ.. ನೀನೇನೋ ಗಿಮಿಕ್ಸ್ ಮಾಡಿದ್ಯಾ.. " ಅಂಥ ಮತ್ತೆ ನನ್ನ ಛೇಡಿಸೋಕೆ ಶುರು ಮಾಡಿದ್ರು ನನ್ನ ಗೆಳೆಯರು, ಇಷ್ಟೆಲ್ಲಾ ಆಯ್ತು ಊಟಾನೂ ಆಯ್ತು. ಸರಿ ನಾನು ಮತ್ತೆ ಹಿಂತಿರುಗುವ ಸಮಯ ಬಂದೇ ಬಿಟ್ಟಿತು. ನಾನು ವಾಪಾಸ್ ಹೊರಡುವಾಗ ಆ ಹುಡುಗಿಯ ಗೆಳತಿ ನನ್ನ ಕರೆದರು. ಅವಳ ಗೆಳತಿ ಅಂದ್ರೆ ನನ್ನನ್ನು ಕಣ್ನಲ್ಲೇ ನುಂಗಿದ್ದ ಆ ಮಧುಬಾಲಿಕೆಯನ್ನು ಪರಿಚಯಿಸಿದರು. She is my close friend 'ಕಾವ್ಯಶ್ರೀ'.. ಎಂದು ಪರಿಚಯಿಸಿದರು. ನಾನು ಮುಜುಗರದಿಂದಲೇ 'ಹಾಯ್ ಮೇಡಂ' ಎಂದೆ. ..ಜೊತೆಗೆ ನನ್ನ ಎರಡೂ ಕೈ ನನ್ನೆದೆ ಮುಂದೆ ನಮಸ್ಕರಿಸ್ಸುವ ರೀತಿಯಲ್ಲಿ ನಿರತವಾಗಿದ್ದವು. ಬುದ್ಧಿ ಆ ಕ್ಷಣ ಏನೇನೋ ಯೋಚಿಸಿತು. ಮನಸ್ಸು ನಾಚಿ ನೀರಾಗಿತ್ತು. ಕಣ್ಣುಗಳಲ್ಲಿ ' ಒಮ್ಮೆ ನೋಡಬೇಕು.. ಮತ್ತೆ ನೋಡಬೇಕು... ಮತ್ತೆ ಮತ್ತೆ ಪ್ರೇಯಸೀಸಾ ಮಾತಾಡಿಸ್ಬೇಕು ಅನ್ನೋದು ಚೊಚ್ಚಲ ಪ್ರೇಮಿಯ ಬಯಕೆ ಅಂತ ಗೋಚರಿಸುತ್ತಿತ್ತು... .! " ಈ 25 ವರ್ಷದಲ್ಲಿ ಆ ಕ್ಷಣವನ್ನು ನನ್ನ ಜೀವನದಲ್ಲಿ ಮೊದಲನೇ ಬಾರಿಗೆ ಅನುಭವಿಸಿದ್ದೆ... ! ಅದೇ ರೀ.. ಚೊಚ್ಚಲ ಪ್ರೇಮಿಯ ಬೆಚ್ಚನೆಯ ಬಯಕೆ. .. ! ಹ್ಞೂ.... ಅನುಪಮ.. .!

ನಾನು ಮದುವೆ ಹೆಣ್ಣಿನ ಮನೆಯಿಂದ ಹೊರಡುವ ಆ ಸಮಯದಲ್ಲಿ ಆ ಹುಡುಗಿ ನನ್ನ ಬೆನ್ನ ಹಿಂದೆ ಬರುತ್ತಿದ್ದದ್ದು ನನ್ನ ಗಮನಕ್ಕೂ ಬಮ್ದಿತು. ಆಗ ನಾನು ಗುನುಗಿದ ಹಾಡು ಹೀಗಿತ್ತು. " ಬಿಡು ಬಿಡು ಕದ್ದು ಕದ್ದು ನೋಡೋದನ್ನ" ಅಷ್ಟೆ..! ಅಲ್ಲಿಂದ ಬೈಕ್ ನಲ್ಲಿ ಬರುವಾಗ ಸುಮಾರು 60 ಕಿ.ಮೀ ದೂರದ ವ್ಯಾಪ್ತಿಯಲ್ಲಿ ನಾನು ಗಾಡಿ ಓಡಿಸುವಾಗ ಆ ಒಂದು ಗಂಟೆ ಕಾಲಾವಾಧಿಯಲ್ಲಿ ನಾನೊಂದು ಹಾಡನ್ನೇ ಬರೆದಿದ್ದೆ.. ಅದು " ಬೆಳದಿಂಗಳಾ.. ತುಂತುರು ಸೋನೆಯಲಿ... ಕಣ್ಣನು ಮುಚ್ಚಿ.. ಮನಸನ್ನು ಬಿಚ್ಚಿ I Love You ಅಂತ ಹೇಳಲಾ... ! ಈ ಮುಂಜಾನೆಯಲ್ಲಿ ಹೂ ಅರಳೋ ಕಂಪಿನಲ್ಲಿ ಹೃದಯವನ್ನೇ ನಿನಗಎ ಧಾರೆ ಎರೆಯಲಾ...! ಹೊನ್ನಿನ ಕಿರಣಗಳು ಜಾರುತಿರಲು ಧರೆಗೆ ನೀ ನನ್ನೊಳು ಅಂತ ಕೂಗಿ ಹೇಳಲಾ...! ಹೀಗೆಂದು ಅಂದು ಬರೆದಿದ್ದೆ. ನಂತರ ನಾನು ಬೆಂಗಳೂರಿಗೆ ಬಂದ ನಂತರ ಆ ಹಾಡಿನ ಸಿಡಿಯನ್ನು ಕಾವ್ಯಶ್ರೀಗೂ ಒಂದು ಕಾಪಿ ಕಳಿಸಿಕೊಟ್ಟೆ. ಅದಕ್ಕೆ ಕಾವ್ಯಶ್ರೀಯಿಂದ ಬಂದ ಉತ್ತರ " ನನಗೆ ಆ ಹಾಡು ತುಂಬಾ ಇಷ್ಟರೀ.." So, ಭಾವನೆಗಳಿಗೂ ಜೀವ ಇದೆ ಅಂತ ಅರ್ಥ ತಾನೆ..?

ಇಷ್ಟೆಲ್ಲಾ ಆದ ಕೆಲವು ದಿನಗಳ ನಂತರ ನನಗೆ ಮತ್ತೆ 'ಕಾವ್ಯಶ್ರೀ' ಯಿಂದ ಒಂದು ಫೋನ್ ಕರೆ ಬಂತು. "ನಮಸ್ಕಾರ ಹೇಗಿದ್ದೀರಾ...?" ಅಂತ ಕೇಳಿದ್ರು....ನಾನು.."ಇಲ್ಲಾ ನೋಡೋಕೆ ನಾನು ಚೆನ್ನಾಗಿಲ್ಲ..ಹೆಲ್ತಿಯಾಗಿದ್ದೇನೆ" ಅಂದೆ. ಅದಕ್ಕೆ ಕಾವ್ಯಶ್ರೀ ಹೇಳಿದ್ದು ಹೀಗೆ "ರೀ.. ಅಷ್ಟೊಂದು ಚೆನ್ನಾಗಿದ್ದೀರಾ..ಯಾಕೆ ಹೀಗಂತೀರಾ..?" ಅಂದರು. ನಾನು "ಸತ್ಯರೀ..ನಾನು ನೋಡೋಕೆ ಚೆನ್ನಾಗಿಲ್ಲ..ಆದ್ರೆ ಆರೋಗ್ಯವಾಗಿದ್ದೇನೆ" ಅಂದೆ ಹಾಗೆ ಅವರ ಮಾತುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದೆ. ಅವರ ಮಾತಲ್ಲಿ ಎಲ್ಲೋ ಒಂದು ಕಡೆ 'ಅವರಿಗೆ ನನಗೆ ಹೇಳಬೇಕೆನಿಸಿ.. ಹೇಳದೆಯೇ ಮುಚ್ಚಿಟ್ಟ ವಿಷಯವೊಂದಿದೆ ಅಂತ ಅನಿಸುತ್ತಿತ್ತು".

"ಸೋ..ಕಾವ್ಯಶ್ರೀಯವರೇ..ಒಂದರೂ ಸತ್ಯರೀ...ನಿಮ್ಮನ್ನು ನೋಡಿದಾಗ...ಅಥವಾ ನಿಮ್ಮ ಬಗ್ಗೆ ಏನಾದ್ರೂ ಯೋಚಿಸುವಾಗ ನನಗೆ ಹೀಗೆ ಅನಿಸಿದ್ದಿದೆ..ರೀ...." ನನ್ ದೇಹದಲ್ಲಿ ಒಂದು ಗಾಯ ಆಗಿ.. ಆ ಗಾಯ.. ತುಂಬಾ ತುರುಕೆಯಾಗಿ, ಆ ಗಾಯನ ಕೈ ಬೆರಳಿನಿಂದ ಕೆರೆಯುವಾಗ ಏನೋ ಒಂಥರಾ ಸುಖ.. ಬಟ್ ಆ ಗಾಯ ಮತ್ತು ಸುಖ ಎರಡೂ ಇಲ್ಲಿ ಪ್ರೇಮ ನಿವೇದನೆ.." ಕಾವ್ಯಶ್ರೀಯವರೇ ಇಂದಿಗೂ ನಿಮ್ಮ ಹೆಸರನ್ನು ಹೇಳುತ್ತಾ ನನ್ನ ಗೆಳೆಯರು ನನ್ನನ್ನು ತುಂಬಾ ಛೇಡಿಸುತ್ತಿದ್ದಾರೆ. ಪ್ಲೀಸ್ ಅವರಿಗೆ ನೀವೇ ಏನಾದ್ರೂ ಹೇಳಿ..ಸತ್ಯ ಹೇಳ್ತಿರೋ ಅಥವಾ ಸುಳ್ಳು ಹೇಳ್ತಿರೋ ಗೊತ್ತಿಲ್ಲ... ನನ್ನಿಂದ ಅಂತೂ ನನ್ನ ಗೆಳೆಯರ ತಮಾಷೆಗೆ ಫುಲ್ ಸ್ಟಾಪ್ ಇಡಲು ಅಸಾಧ್ಯ..

ಇಂತಿ- ಭಾವನೆಯ ಬಲೆಯೊಳಗೆ ಸಿಕ್ಕಿ ವಿಲಿವಿಲಿ ಒದ್ದಾಡೋ ಮೀನು...
-ಕವೀಶ್ ಶೃಂಗೇರಿ. ಫೋ: 99453 42433

No comments:

Post a Comment