Saturday, May 2, 2009

ಭಾವಾಂತರಂಗ -೪

"ಸುಮಾಳ ನೆನಪಲ್ಲಿ ಸುಮ್ ಸುಮ್ನೆ"

ನಾನು ಪಿಯುಸಿ ಓದುತ್ತಿದ್ದ ಆ ದಿನಗಳಲ್ಲಿ ಕ್ಲಾಸ್ ಗೆ ಟೈಮ್ ಆಯ್ತು ಎಂದು ಅವಸರದಿಂದ ಹೋಗುತ್ತಿದ್ದೆ. ನಮ್ಮ ಕಾಲೇಜಿನ ಬಳಿ ಸ್ವಲ್ಪ ದೂರದಲ್ಲಿ ಒಂದು 'ಕಾಳಿಕಾಂಬ' ದೇವಸ್ಥಾನ ಇದೆ. ಅಲ್ಲಿ ಹೋಗುತ್ತಿರುವಾಗ ನನ್ನ ಕಣ್ಣಿಗೆ ನನ್ನ ಕ್ಲಾಸ್ ಮೆಟ್ 'ಸುಮ' ಕಂಡಳು. ನಾನು ಅವಳನ್ನು ನೋಡಿದರೂ ನೋಡದಂತೆ ನನ್ನ ಪಾಡಿಗೆ ನಾನು ಮುಂದೆ ಸಾಗುತ್ತಿದ್ದೆ... ಅಷ್ಟರಲ್ಲಿ ಒಂದು ಧ್ವನಿ "ಗುಡ್ ಮಾರ್ನಿಂಗ್ ಕೈ" ಎಂದಿತು! ನಾನು ತಲೆ ಎತ್ತಿ ನೋಡಿದೆ ಅದು ಸುಮಾಳ ಧ್ವನಿಯಾಗಿತ್ತು. ನಾನು " ವೆರಿ ಗುಡ್ ಮಾರ್ನಿಂಗ್.." ಅಂತ ಹೇಳಿ ಮುಂದೆ ಸಾಗುವಷ್ಟರಲ್ಲಿ ಸುಮ ನನ್ನ ಬಳಿ ಸಮೀಪಿಸಿ ನನ್ನ ಕೈಗೆ ಒಂದು ಲೆಟರ್ ಕೊಟ್ಟಳು...! ನಾನು "ಏನಿದು..?" ಎಂದೆ. ಆಗ ಅವಳು "ಕ್ಲಾಸ್ ಮುಗಿದ ಮೇಲೆ ಓದಿ..." ಎಂದಳು. ನಾನು ನಗುತ್ತಲೇ "ಏಮ್ ಕವನಾನಾ...? ಕಥೆನಾ..? ಕಾದಂಬರಿನಾ...?" ಎಂದು ಆ ಲೆಟರನ್ನು ಜೇಬಿನಲ್ಲಿ ಭದ್ರವಾಗಿ ಇರಿಸಿಕೊಂಡೆ.

ನಮ್ಮ ಕ್ಲಾಸ್ ರೂಂಗೆ ನಾವಿಬ್ಬರೂ ಒಟ್ಟೀಗೆ ಎಂಟ್ರಿ ಕೊಟ್ಟೆವು. ಆಗ ಕ್ಲಾಸ್ ಶುರುವಾಗಿತ್ತು. ನಮ್ಮಿಬ್ಬರನ್ನು ಒಟ್ಟಿಗೆ ನೋಡಿದ ನನ್ನ ಗೆಳೆಯರಿಗೆ ಖುಷಿಯೇ ಖುಷಿ. ಗೆಳೆಯರೆಲ್ಲಾ ನನಗೆ ಯಾವಾಗಲೂ ತಮಾಷೆ ಮಾಡುತ್ತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಅವರ ತಮಾಷೆಗೆ ಮತ್ತೊಂದು ವಸ್ತು ಸಿಕ್ಕಂತಾಯಿತು. ನನ್ನ ಗೆಳೆಯರಿಗೇನೋ ಈ ವಿಷಯ ತಮಾಷೆಯಾಗಿತ್ತು. ಆದ್ರೆ ಇದರಿಂದಾಗಿ ಮುಂದೆ ಆದ ಅನಾಹುತವನ್ನು ಈಗಲೂ ನೆನೆದರೆ ಅಬ್ಬಾ... .ಈಗಲೂ ಮೈ ಜುಂ ಎನ್ನುತ್ತದೆ.

ಅವಳು ಅಂದು ನನ್ನ ಕೈಗೆ ಕೊಟ್ಟಿದ್ದು "ಲವ್ ಲೆಟರ್" ಆಗಿತ್ತು. " ಮುದ್ದಿಸೋ ಮುದ್ದಿನ ಅಕ್ಷರದಿಂದ ಎಳೆಯ ಹೃದಯಕ್ಕೆ ನೇರವಾಗಿ ಬಂದು ತಬ್ಬಿಕೊಂಡು ಒಂದು ಕಿಸ್ ಕೊಟ್ಟ ಹಾಗಿತ್ತು, ಆ ಪತ್ರದ ಭಾವ." ಸುಮ ಅವರ ಮನೆತನ ಸ್ವಲ್ಪ ಹೆಸರುವಾಸಿಯಾಗಿದ್ದು ಅವರಪ್ಪನ ಹೆಸರು ಹೇಳಿದ್ರೆ ಎಲ್ಲರೂ ಹೆದರುತ್ತಲೇ ಗೌರವಿಸುತ್ತಾರೆ. ಅವಳಿಗೆ ಒಬ್ಬನೇ ಅಣ್ಣ ಸುಧೀರ. ತಂಗಿ ಅಂದ್ರೆ ಅವನಿಗೆ ಪ್ರಾಣ. ಸುಧೀರ ತನ್ನ ತಂಗಿ ಸುಮಾಳನ್ನು ಇದುವರೆಗೂ ಕೆಣಕಿದವಾರನ್ನು ಸುಮ್ಮನೆ ಬಿಟ್ಟಿರಲಿಲ್ಲ. ಆದರೆ ಅದೀಗ ನನ್ನ ಸರದಿಗೆ ಬಂದೇ ಬಿಟ್ಟಿತು.

ನಮ್ಮ ಕಾಲೇಜಿನಲ್ಲಿ ಇಷ್ಟೊತ್ತಿಗಾಗಲೇ ಗೋಡೆ ಮೇಲೆ, ಕಾಲೇಜಿನ ಕಾಂಪೌಂಡ್ ನಲ್ಲಿರುವ ಮರದ ಮೇಲೆ ನನ್ನ ಹೆಸರಿನ ಜೊತೆ ಸುಮಾಳ ಹೆದರನ್ನು ಸೇರಿಸಿ ನನ್ನ ಕೆಲವು ಸ್ನೇಹಿತರು ನನ್ನ ಕೆಣಕಲೆಂದೇ ಬರೆದಿದ್ದರು. ಇದನ್ನು ನಮ್ಮ ಕನ್ನಡ ಉಪನ್ಯಾಸಕಿ ನಯನ ಮೇಡಂ ನೋಡಿ ನನ್ನ ಕರೆದು "ಏನಿದು..?" ಅಂದರು. ನಾನು " ಯಾವುದು..?" ಎಂದೆ ...ಅವರು ಕೋಪಗೊಂಡು "ತಮಾಷೆ ಬೇಡ ನಿನ್ಗೆ ಕೇಳಿದ್ದು. . ." ಎಂದು ಗೋಡೆಯ ಕಡೆಗೆ ಕೈ ಬೆರಳು ತೋರಿಸಿದರು. ಆಗಲೇ ನನಗೆ ಕರೆಂಟ್ ಹೊಡೆದ ಅನುಭವ ಆಗಿದ್ದು...!ನನಗೆ ಅಲ್ಲಿಯವರೆಗೂ ಈ ಸುಮಾಳ ಹುಡುಗಾಟ ನನ್ನ ಗೆಳೆಯರ ತಮಾಷೆತಾಗಿ. ನಯನ ಮೇಡಂ ಅವರ ಕಣ್ಣಿಗೆ ನಾನು ಬೀಳುತ್ತೇನೆಂಬ ಅರಿವೇ ಇರಲಿಲ್ಲ. ... .

ಅಂದು ನಯನ ಮೇಡಂ ಕೇಳಿದ ಪ್ರಶ್ನೆಗಳಿಗೆಲ್ಲಾ ನಾನು ಕೊಟ್ಟ ಉತ್ತರ ಒಂದೇ ಆಗಿತ್ತು.. "ಮೇಡಂ ಈ ವಿಚಾರವಾಗಿ ನಿಮಗೆ ಎಷ್ಟು ಗೊತ್ತೋ ನನಗೂ ಅಷ್ಟೇ ಗೊತ್ತು.." ಎಂದು ಹೇಳಿದೆ. ಇದುವರೆಗೂ ಆಗಿದ್ದು- ಸ್ವಲ್ಪ ಬೋರ್ ಹೊಡೆಸುವ ಸಾಮಾನ್ಯ ವಿಷಯ ಇನ್ನು ಮುಂದೆ ಇರೋದು ಕುತೂಹಲದ ಜೊತೆಗೆ ಭಯ... !

ನಯನ ಮೇಡಂ ನನ್ನ ಕೂರಿಸಿಕೊಂಡು ಆ ಹುಡುಗಿಯ ಮನೆತನದ ಬಗ್ಗೆ ನನಗೆ ವಿವರಿಸುತ್ತಾ... ನನಗೆ ಪ್ರಾಣಭಯ ಉಂಟಾಗುವ ಸಂಭವವಿದೆ ಎಂದು ಹೇಳಿದರು. "ನೀನು ಈ ಕಾಲೇಜು ಬಿಟ್ಟು ದೂರ ಎಲ್ಲಾದ್ರೂ ಹೋಗಿ ಚೆನ್ನಾಗಿ ಓದು. ನೀನು ಒಳ್ಳೆ ಹುಡುಗ. ನನಗೆ ನಿನ್ನ ಬಗ್ಗೆ ಚೆನ್ನಾಗಿ ಗೊತ್ತು. ಅದ್ರೆ ನಿನ್ಗೆ ಒಳ್ಳೇದಕ್ಕೆ" ಎಂದು ಹೇಳಿದರು. ಅಲ್ಲಿಯವರೆಗೆ ನಾನು ಎನೂ ಆಗೆ ಇಲ್ಲ ಎಂದುಕೊಂಡಿದ್ದೆ. ಈಸ್ಗ ಶುರುವಾಯಿತು ನೋಡಿ ಈ ಸಮಯದಲ್ಲಿ ನನಗೆ ಬಂದ ಕೋಪ ಈಗಲೂ ನೆನಸಿಕೊಂಡರೆ ಅಲ್ಲೋಲ-ಕಲ್ಲೋಲ..! ಆ ನನ್ನ ಕೋಪಕ್ಕೆ ಬಲಿಯಾದದ್ದು ನಯನ ಮೇಡಂ... ನನ್ನ ಗೆಳೆಯರು..ಎಂದೂ ನನ್ನ ಬಾಯಿಂದ ಬರದ ಅವಾಚ್ಯ ಶಬ್ದಗಳು ಅಂದು ನನ್ನ ಕಂಟ್ರೋಲ್ ದಾಟಿ ಈಚೆಗೆ ಬಂದೇ ಬಿಟ್ಟವು..!

"ಯಾವನೋ ರತ್ನಾಕರ್ ಗೌಡ ಅಂತೆ.. ಅವ್ನ ಮಗ ಸುಧೀರ್ ಅಂತೆ ಅವ್ನ ತಂಗೀನಾ ನಾನ್ ಲವ್ ಮಾಡ್ತೀದ್ದೀನಂತೆ. ಅವ್ಳೇನ್ ತ್ರಿಪುರ ಸುಂದ್ರೀನಾ. ಅಲ್ಲಾ ಅವ್ಳು ಮಾಡಿದ ತಪ್ಪಿಗೆ ನಾನ್ ಊರನ್ನೇ ಬಿಟ್ಟು ಎಲ್ಲಾದ್ರೂ ಹೋಗಬೇಕಂತೆ.....ಅಲ್ಲಾ ಮೇಡಮ್ ನಿಮಗಾದ್ರೂ ಬುದ್ಧಿ ಬೇಡ್ವಾ.. ನಾನೇನು ಕಳ್ಲಾನಾ.... .ಓಡೋಗಕ್ಕೆ. ಆ ಹುಡ್ಗೀದೆ ಎಲ್ಲಾ ತಪ್ಪು.. ತಪ್ಪೋ -ಸರೀನೋ...ಅದ್ಕೆ ಸುಮಾಳ ಮನೆಯವ್ರಿಗೆ ಹೆದರಿಕೊಂಡು ನಾನ್ ಊರು ಬಿಟ್ಟು ಹೋಗ್ ಬೇಕಾ.. ಇಂಪಾಸಿಬಲ್.. " ಎಂದು ಹುಚ್ಚನ ರೀತಿ ಬಾಯಿಗೆ ಬಂದಂತೆ ಕೂಗಾಡಿದೆ.

ಈ ಸಮಯದಲ್ಲಿ ಸುಮ ಅವಳ ಮನೆಯವರಿಂದ ಅದೇನು ಕಿರುಕುಳ ಅನುಭವಸಿದ್ದಳೋ ಗೊತ್ತಿಲ್ಲ. ನಾನು ಅದನ್ನು ಗಮನಿಸಿದೆ. ಆಗ ಸುಮ ಏನೋ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದಾಳೆಂದು ನನಗೆ ಗೊತ್ತಾಯಿತು. ನಂತರ ಕಾಲೇಜ್ ಮುಗಿದ ಮೇಲೆ ನಾನು ನನ್ನ ಮನೆಗೆ ಬಂದೆ. ತಕ್ಷಣ ಸುಮ 'ಏನೋ ತೊಂದ್ರೇಲಿ ಇರಬೇಕು. ಏನಾದ್ರೂ ಆಗಲಿ ಅವಳ ಮನೆಗೆ ಬೇರೆ ಹೆಸರಿನಿಮ್ದ ಒಂದು ಫೋನ್ ಕರೆ ಮಾಡಲು ನಿರ್ಧರಿಸಿ ಫೋನ್ ಮಾಡಿಯೇ ಬಿಟ್ಟೆ. ಆಗ ಅವಳ ತಾಯಿ ಫೋನ್ ರಿಸೀವ್ ಮಾಡಿದರು."ಸುಮಾ ಇದಾರಾ...?" ಅಂತ ಕೇಳಿದೆ. ಅದಕ್ಕೆ ಅವರು " ಇಲ್ಲಾ ಇನ್ನೂ ಕಾಲೇಜ್ ನಿಂದ ಬಂದಿಲ್ಲ. ಇಷ್ಟೊತ್ತಿಗೆ ಬರಬೇಕಾಗಿತ್ತು. ತಾವು ಯಾರು..?" ಎಂದರು. ನಾನು ತಕ್ಷಣ ಫೋನ್ ಇಟ್ಟು ನನ್ನ ತಾಯಿಗೆ ಈ ವಿಷಯ ವಿವರಿಸಿ ಸುಮಾಳಿಗೆ ಈ ಸಮಯದಲ್ಲಿ ಏನೋ ಅಪಾಯ ಕಾದಿದೆ ಅವಳು ಅತ್ಮಹತ್ಯೆಗೆ ಪ್ರಯತ್ನಿಸಿದರೆ ತೊಂದರೆ ಆದೀತು. ಅವಳು ಒಂದು ದಿನ ನನ್ನ ಬಳಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದರೆ ತೊಂದರೆ ಆದೀತು. ಅವಳು ಒಂದು ದಿನ ನನ್ನ ಬಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮಾಷೆಗಾಗಿ ಹೇಳಿದ್ದಳು. ಆಗ ನನಗೆ ಅವಳು ಅಂದು ಹೇಳಿದ ಆತ್ಮಹತ್ಯೆಯ ವಿಷಯ ಅರಿವಾಗಿ ತಕ್ಷಣ ಶೃಂಗೇರಿ ಹೊಳೆಯ ಬಳಿ ಹೋಗಿದ್ದೆ. ಆ ಸಮಯದಲ್ಲಿ ಒಂದು ಕಲ್ಲು ಬಂಡೆಯ ಮೇಲೆ ಅಳುತ್ತಾ ಕುಳಿತ್ತಿದ್ದಳು. ಅವಳನ್ನು ಆತ್ಮಹತ್ಯೆಯಿಂದ ಮನ ಒಲಿಸೊ ಹೊರತಂದೆ. ಅಬ್ಬಾ ಸಾಕೇ ಸಾಕಾಯ್ತು. ನಂತರ ಅವಳ ಮನೆಗೆ ಕಳುಹಿಸಿಕೊಟ್ಟೆ.ಮುಂದೆಂದೂ ಸುಮ ಆತ್ಮಹತ್ಯೆಗ್ ಪ್ರಯತ್ನಿಸದಂತೆ ಆಣೆ ಮಾಡಿಸಿದೆ.

ಇಷ್ಟೆಲ್ಲಾ ನಡೆಯುವ ವೇಳೆಗೆ ನಾನು ನನ್ನ ಚಲನಚಿತ್ರದ ಕೆಲಸದ ಮೆಲೆ ಬೆಂಗಳೂರಿಗೆ ಬಂದಿದ್ದೆ(ನಾನೊಬ್ಬ ಚಲನಚಿತ್ರ ಸಹನಿರ್ದೇಶಕನಾಗಿ ಆಗ ಕೆಲಸ ಮಾಡುತ್ತಿದ್ದೆ) ಈ ಸಮಯದಲ್ಲಿ ಸುಮಾಳ ಅಣ್ಣ ಸುಧೀರ್ ನಮ್ಮ ಮನೆಗೆ ಫೋನ್ ಮಾಡಿ ನನ್ನ ಅಮ್ಮನ ಹತ್ತಿರ ಮಾತನಾಡಿ ನನಗೆ ಬೈಯುತ್ತಾ.. 'ನನ್ನ ಕೈ-ಕಾಲು ಮುರಿಯುವುದಾಗಿ" ಹೇಳಿದ್ದನಂತೆ. ನನ್ನ ಅಮ್ಮನಿಗೆ ಎಲ್ಲಾ ವಿಷಯಗಳು ಗೊತ್ತಿಲ್ಲದ ಕಾರಣ ಸುಮ್ಮನಾಗಿದ್ದರು. ಅವರು ಎಷ್ಟ್ರಾದ್ರೂ ಮಲೆನಾಡಿನ ಹೆಣ್ತನ ತುಂಬಾ ಸೌಮ್ಯ ಸ್ವಭಾವ ಅಲ್ಲವೇ? ಅದೇ ಸಮಯಕ್ಕೆ ಸರಿಯಾಗಿ ನಾನು " ನವಶಕ್ತಿ ವೈಭವ" ಚಿತ್ರದ ಚಿತ್ರೀಕರಣಕ್ಕೆ ಶೃಂಗೇರಿಗೆ ಹೋಗಿದ್ದೆ. ಆ ಸಮಯದಲ್ಲಿ ಇಡೀ ಊರಿಗೆ ಊರೇ ಚಿತ್ರೀಕರಣ ನೋಡಲು ಬಂದಿತ್ತು. ಎಲ್ಲರೂ ಬಂದು ನನ್ನನ್ನು ಮಾತನಾಡಿಸಿದರು. ಆದರೆ ನನ್ನ ಕೈ-ಕಾಲು ಮುರಿಯುತ್ತೇನೆಂದು ಒಣ ಧೀಮಾಕು ತೋರಿಸಿದ ಸುಧೀರ ಆ ಮೂರೂ ದಿನ ಚಿತ್ರೀಕರಣದಲ್ಲಿ ಪತ್ತೆ ಇರಲಿಲ್ಲ.

ಇಷ್ಟೆಲ್ಲಾ ಆದ ಒಂದು ವರ್ಷದ ನಂತರ ಸುಮಾಳ ಮದುವೆ ಫಿಕ್ಸ್ ಆಯ್ತು. ನನಗೆ ವೆಡ್ಡಿಂಗ್ ಕಾರ್ಡ್ ಪೋಸ್ಟ್ ಮೂಲಕ ಕಳುಹಿಸಿದ್ದಲು. ಅದರ ಜೊತೆಗೊಂದು ಸಣ್ಣ ಪತ್ರವನ್ನು ಬರೆದು ಇಟ್ಟಿದ್ದಳು.." ನಡೆದದ್ದೆಲ್ಲಾ ಮರೆತು ಬಿಡು ನೀನು ಮದುವೆಗೆ ಬರಲೇಬೇಕು" ಎಂಬ ಒತ್ತಾಯವೂ ಇಟ್ಟಿದ್ದಳು. ಆದ ಕಾರಣ ನಾನು ಮದುವೆಗೆ ಹೋದೆ. 'ಶೃಂಗೇರಿಯ ಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ' ಅವಳ ಮದುವೆ. ಅಂದು ನಾನು ಹೋದ ತಕ್ಷಣ ಸುಧೀರ್ ಬಂದು ನನ್ನ ತಬ್ಬಿಕೊಂಡು "ಸಾರಿ ರೀ.. ಬಂದ್ರಲ್ಲಾ.. ತುಂಬಾ ಸಂತೋಷ" ಅಂದ. ನಂತರ ತನ್ನ ಗಂಡನ ಜೊತೆ ನಿಂತಿದ್ದ ಸುಮ ನನ್ನ ನೋಡಿದಾಕ್ಷಣ ದೂರದಿಂದಲೇ 'ಹಾಯ್' ಎನ್ನುವಂತೆ ಕೈ ಸನ್ನೆ ಮಾಡಿದಳು. ನಂತರ ಮಂಟಪ ಬಳಿ ಹೋಗಿ ಸುಮ ದಂಪತಿಗಳಿಗೆ ಶುಭ ಹಾರೈಸಿ ಹಿಂತಿರುಗಿದೆ.

ಇದಾದ 4 ವರ್ಷಗಳ ನಂತರ ಮೊನ್ನೆ 'ಬೆಂಗಳೂರಿನ ಫೋರಂ ಮಾಲ್ 'ನಲ್ಲಿ ಸಿಕ್ಕಿದ್ದಳು ಸುಮ. ಆಗ ಅವಳ ಗಂಡನ ಕೈಯಲ್ಲೊಂದು ಗಂಡು ಮಗು ಇತ್ತು. ಆಗ ತನ್ನ ಗಂಡ-ಪಾಪುವನ್ನು ನನಗೆ ಪರಿಚಯಿಸಿದಳು. ಈಗ ಅವಳ ಜೀವನ ಚೆನ್ನಾಗಿದೆ.. ಮುಂದೆಯೂ ಚೆನ್ನಾಗಿರಲಿ

-ಇಂತಿ ನೆನಪುಗಳ ದಾರದಲ್ಲಿ ಜಾರದಂತೆ ಹೂ ಮಾಲೆಯನು ಕಟ್ಟಿರುವ
-ಕವೀಶ್ ಶೃಂಗೇರಿ 9945342433

No comments:

Post a Comment